ನಾರ್ಶ ಸಿಂಗಾರಿ ಹಾಜಿ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ ಬೇಧಿಸಿದ ದ.ಕ. ಜಿಲ್ಲಾ ವಿಶೇಷ ಪೊಲೀಸ್ ತಂಡ : ಕಾರು, ನಗದು ಸಹಿತ ಕೇರಳ ಮೂಲದ ಓರ್ವ ಆರೋಪಿ ಪೊಲೀಸ್ ಬಲೆಗೆ - Karavali Times ನಾರ್ಶ ಸಿಂಗಾರಿ ಹಾಜಿ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ ಬೇಧಿಸಿದ ದ.ಕ. ಜಿಲ್ಲಾ ವಿಶೇಷ ಪೊಲೀಸ್ ತಂಡ : ಕಾರು, ನಗದು ಸಹಿತ ಕೇರಳ ಮೂಲದ ಓರ್ವ ಆರೋಪಿ ಪೊಲೀಸ್ ಬಲೆಗೆ - Karavali Times

728x90

23 January 2025

ನಾರ್ಶ ಸಿಂಗಾರಿ ಹಾಜಿ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ ಬೇಧಿಸಿದ ದ.ಕ. ಜಿಲ್ಲಾ ವಿಶೇಷ ಪೊಲೀಸ್ ತಂಡ : ಕಾರು, ನಗದು ಸಹಿತ ಕೇರಳ ಮೂಲದ ಓರ್ವ ಆರೋಪಿ ಪೊಲೀಸ್ ಬಲೆಗೆ

 ಬಂಟ್ವಾಳ, ಜನವರಿ 23, 2025 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ನಾರ್ಶ ಅವರ ಮನೆಯಲ್ಲಿ ಜನವರಿ 3 ರಂದು ಶುಕ್ರವಾರ ರಾತ್ರಿ ಇಡಿ ಅಧಿಕಾರಿಗಳ ನೆಪದಲ್ಲಿ ದಾಳಿ ನಡೆಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇರಳ ಮೂಲದ ಓರ್ವ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪೆರಿನಾಡ್, ತ್ರಿಕ್ಕಡವೂರು, ಮಾತಿಲಿಲ್ ಅಂಚೆ ವ್ಯಾಪ್ತಿಯ ಚಿರಕರ್ ಜಂಕ್ಷನ್, ಟ್ರಿನಿಟಿ ವಿಲ್ಲಾ ಯಸುದಾಸ್ ಲಿಯೋನ್ ಫೆರ್ನಾಂಡಿಸ್ ಮನೆಯ ನಿವಾಸಿ ಅನಿಲ್ ಫರ್ನಾಂಡಿಸ್ (49) ಎಂದು ಹೆಸರಿಸಲಾಗಿದೆ. 

ನಾರ್ಶ ಸುಲೈಮಾನ್ ಹಾಜಿ ಮನೆಯಲ್ಲಿ ಕಳೆದ ಜನವರಿ 3 ರಂದು ಶುಕ್ರವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ 6 ಜನ ಅಪರಿಚಿತರು ಇ ಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2025 ರಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಜನವರಿ 23 ರಂದು ಗುರುವಾರ ಆರೋಪಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಕೆಎಲ್02 ಬಿಪಿ1104 ನೊಂದಣಿ ಸಂಖ್ಯೆಯ ಎರ್ಟಿಗಾ ಕಾರು, 5 ಲಕ್ಷ ರೂಪಾಯಿ ನಗದು, ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ಟಿಎನ್20 ಡಿಬಿ5517ನೇ ನಂಬರ ಪ್ಲೇಟ್‍ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ವಾದೀನಪಡಿಸಿಕೊಂಡ ನಗದು ಹಾಗೂ ವಾಹನದ ಒಟ್ಟು ಮೌಲ್ಯ 11 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ದಸ್ತಗಿರಿಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನಾರ್ಶ ಸಿಂಗಾರಿ ಹಾಜಿ ಮನೆಯಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ ಬೇಧಿಸಿದ ದ.ಕ. ಜಿಲ್ಲಾ ವಿಶೇಷ ಪೊಲೀಸ್ ತಂಡ : ಕಾರು, ನಗದು ಸಹಿತ ಕೇರಳ ಮೂಲದ ಓರ್ವ ಆರೋಪಿ ಪೊಲೀಸ್ ಬಲೆಗೆ Rating: 5 Reviewed By: karavali Times
Scroll to Top