ಸುಳ್ಯ, ಜನವರಿ 18, 2025 (ಕರಾವಳಿ ಟೈಮ್ಸ್) : ವಿಪರೀತ ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಪತ್ನಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಂದು ತಾನೂ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೃತ ಪತಿ-ಪತ್ನಿಯನ್ನು ರಾಮಚಂದ್ರ ಗೌಡ ಹಾಗೂ ವಿನೋದ ಕುಮಾರಿ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತರ ಪುತ್ರ ಪ್ರಶಾಂತ್ ಎಸ್ ಆರ್ (26) ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ತಂದೆ ರಾಮಚಂದ್ರ ಗೌಡ ಪ್ರತಿದಿನ ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದು, ಶುಕ್ರವಾರ ರಾತ್ರಿ ಕೂಡಾ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದು ಅಜ್ಜ, ಅಜ್ಜಿ ಹಾಗೂ ತಾಯಿಗೆ ಬೈದಿದ್ದಲ್ಲದೆ ನಿರ್ಮಾಣ ಹಂತದ ಮನೆಯೊಳಗಿದ್ದ ತಾಯಿ ವಿನೋದ ಕುಮಾರಿ ಅವರೊಂದಿಗೆ ಜಗಳ ಮಾಡಿ ಕೈಯಲ್ಲಿದ್ದ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಲ್ಲದೆ ಬಳಿಕ ರಬ್ಬರ್ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment