ಮಂಗಳೂರು, ಜನವರಿ 23, 2024 (ಕರಾವಳಿ ಟೈಮ್ಸ್) : ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸರು ಹೆಡೆ ಬಿಚ್ಚಿದ್ದಾರೆ. ನಗರದ ಬಿಜೈ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ಇರುವ ಮಸಾಜ್ ಸೆಂಟರ್ ಒಂದಕ್ಕೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಉಪಕರಣಗಳನ್ನು ಪುಡಿಮಾಡಿ ಅಟ್ಟಹಾಸ ಮೆರೆದಿದ್ದಾರೆ. ಮಸಾಜ್ ಸೆಂಟರ್‍ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಪುಂಡರು ಕಾನೂನು ಕೈಗೆತ್ತಿಕೊಂಡು ಈ ದಾಳಿ ನಡೆಸಿದ್ದಾರೆ.
ಸುಮಾರು ಹತ್ತಕ್ಕೂ ಅಧಿಕ ಮಂದಿಯ ತಂಡ ಈ ದಾಳಿ ನಡೆಸಲಾಗಿದೆ ಎನ್ನಲಾಗಿದ್ದು, ರಾಜ್ಯ ಗೃಹ ಮಂತ್ರಿ ಪಕ್ಕದ ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ವೇಳೆಯಲ್ಲೇ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳಿಗೆ ಪೊಲೀಸರ ಹಾಗೂ ಕಾನೂನು ಸುವ್ಯವಸ್ಥೆಯ ಭಯ ಇಲ್ಲದಂತಾಗಿದೆ ಎಂದು ಜನ ಆತಂಕಗೊಳ್ಳುವಂತಾಗಿದೆ. ಕಳೆದ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ದ ಸಂದರ್ಭದಲ್ಲೇ ಕೆ ಸಿ ರೋಡು ಸಹಕಾರಿ ಬ್ಯಾಂಕ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆಗೈದು ಪರಾರಿಯಾಗಿದ್ದ ಘಟನೆ ನಡೆದಿತ್ತು. ಇದೀಗ ವಾರದ ಅಂತರದಲ್ಲಿ ಗೃಹ ಮಂತ್ರಿ ಪಕ್ಕದ ಜಿಲ್ಲಾ ಪ್ರವಾಸದಲ್ಲಿರುವಾಗಲೇ ನೈತಿಕ ಪೊಲೀಸರು ದಾಳಿ ನಡೆಸಿ ಮಂಗಳೂರು ಪೊಲೀಸರಿಗೆ ಸವಾಲಾಗಿದ್ದಾರೆ.
ಘಟನೆ ನಡೆಯುತ್ತಲೇ ಉಡುಪಿ ಪ್ರವಾಸದಲ್ಲಿದ್ದ ಗೃಹ ಮಂತ್ರಿಗಳು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಿಗೆ ಘಟನೆಗೆ ಸಂಬಂಧಿಸಿದಂತೆ ರಾಮಸೇನೆ ಸಂಘಟನೆಯ ಮುಖಂಡ ಪ್ರಸಾದ್ ಅತ್ತಾವರ ಸಹಿತ 14 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಸಾದ್ ಅತ್ತಾವರ, ಹರ್ಷರಾಜ್ ನೀರುಮಾರ್ಗ, ಮೋಹನ್ ದಾಸ್ ಮೂಡುಶೆಡ್ಡೆ, ಪುರಂದರ ಉಪ್ಪಳ, ಸಚಿನ್ ವಾಮಂಜೂರು, ರವೀಶ್ ರವೀಶ್ ಪೆರ್ಮಂಕಿ, ಸುಕೇಶ ಬೆಂಜನಪದವು, ಅಂಕಿತ್ ವಾಮಂಜೂರು, ಕಾಳಿ ಮುತ್ತು ಮೂಡುಶೆಡ್ಡೆ, ಅಭಿಲಾಷ್ ವಾಮಂಜೂರು, ದೀಪಕ್ ಮೂಡುಶೆಡ್ಡೆ, ವಿಘ್ನೇಶ್ ಶೆಟ್ಟಿ ಸರಿಪಳ್ಳ, ಶರಣ್ ರಾಜ್ ಮಂಗಳದೇವಿ, ಪ್ರದೀಪ್ ಪೂಜಾರಿ ಎಂದು ಹೆಸರಿಸಲಾಗಿದೆ.
ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಮಧ್ಯಾಹ್ನ ಬಿಜೈ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯಿರುವ ಕಲರ್ಸ್ ಯೂನಿಸೆಕ್ಸ್ ಸೆಲೂನ್ ಮೇಲೆ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಕಾರ್ಯಕರ್ತರು ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಉಡುಪಿಯಲ್ಲಿ ಹೇಳಿಕೆ ನೀಡಿರುವ ಗೃಹ ಮಂತ್ರಿ ಡಾ ಜಿ ಪರಮೇಶ್ವರ ಅವರು, “ಯುನಿಸೆಕ್ಸ್ ಪಾರ್ಲರ್ ಮೇಲಿನ ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ. ಆದರೆ, ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಘಟನೆಗಳು ನಡೆಯಬಾರದು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ದಾಳಿಕೋರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಗೃಹ ಮಂತ್ರಿ ದಾಳಿ ನಡೆದ ಸಂಸ್ಥೆಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ, ಆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಬೇಕೇ ಹೊರತು ದಾಳಿಯಂತಹ ಕಾನೂನು ಕೈಗೆತ್ತಿಕೊಳ್ಳುವ ಕ್ರಮ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣವನ್ನು ಉದ್ದೇಶಿಸಿ ಮಾತನಾಡಿದ ಡಾ ಪರಮೇಶ್ವರ್, ಪೆÇಲೀಸರಿಗೆ ಮೊದಲೇ ತಿಳಿದಿದ್ದರೆ ತಡೆಯುತ್ತಿದ್ದರು. ಬ್ಯಾಂಕ್ ಭದ್ರತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು. ಬ್ಯಾಂಕ್ ಭದ್ರತೆಯಲ್ಲಿ ಲೋಪವಾಗಿದೆ, ಆದರೆ ಎರಡು ದಿನಗಳಲ್ಲಿ ಪೆÇಲೀಸರು ಆರೋಪಿಗಳನ್ನು ಬಂಧಿಸಿ 12 ಕೋಟಿ ಮೌಲ್ಯದ ಚಿನ್ನ ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
0 comments:
Post a Comment