ಬಂಟ್ವಾಳ, ಜನವರಿ 03, 2025 (ಕರಾವಳಿ ಟೈಮ್ಸ್) : ತಾಲೂಕಿನ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನ ಪರಿಸರದಲ್ಲಿ ವಿದ್ಯುತ್ ಕಂಬಗಳು ತುಕ್ಕು ಹಿಡಿದಿದ್ದಲ್ಲದೆ ವಾಲಿಕೊಂಡಿದ್ದು, ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿ ಕಂಡು ಬರುತ್ತಿದೆ. ಭಕ್ತಾದಿಗಳು ಹಾಗೂ ಪ್ರವಾಸಿಗರು ಇದರಿಂದ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತುಕ್ಕು ಹಿಡಿದಿರುವ ಕಬ್ಬಿಣದ ವಿದ್ಯುತ್ ಕಂಬಗಳು, ವಾಲಿಕೊಂಡಿದ್ದು, ಒಂದು ಕಂಬಕ್ಕೆ ಇನ್ನೊಂದು ಕಂಬ ಆಸರೆಯಾಗಿರುವ ದುಸ್ಥಿತಿಯಲ್ಲಿದೆ. ಈಗಲೋ ಆಗಲೋ ಕುಸಿದು ಬೀಳುವ ಆತಂಕ ಎದುರಿಸುತ್ತಿದೆ. ಪುರಾತನ ಕ್ಷೇತ್ರವಾದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಕಾಲು ನಡಿಗೆಯಲ್ಲಿ ತೆರಳುವಾಗ ಸಿಗುವ ದಾರಿದೀಪ ಮತ್ತು ವಿದ್ಯುತ್ ಕಂಬಗಳ ಸ್ಥಿತಿ ಆಯೋಮಯವಾಗಿದೆ. ಶ್ರೀ ಕಾರಿಂಜ ಕ್ಷೇತ್ರ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದ್ದರೂ, ಸುಮಾರು 60 ವರ್ಷಗಳ ಹಿಂದೆ ವಿದ್ಯುತ್ ಸಂಪರ್ಕದ ದಾರಿದೀಪದ ವ್ಯವಸ್ಥೆಯಾಗಿದ್ದು, ಈಗಲೂ ಹಳೆಯದಾದ ಏಣಿ ಸಹಿತ ಕಬ್ಬಿಣದ ವಿದ್ಯುತ್ ಕಂಬಗಳೇ ಆಸರೆಯಾಗಿದೆ. ಬಂಡೆಕಲ್ಲುಗಳ ಮೇಲೆ ಹತ್ತುವಾಗಲು ಇಂತಹ ವಿದ್ಯುತ್ ಕಂಬಗಳು ಕಂಡು ಬರುತ್ತಿದ್ದು, ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಜಾತ್ರಾ ಸಮಯದಲ್ಲಿ ಬಾಡಿಗೆಗೆ ವಿದ್ಯುತ್ ದೀಪಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಆದರೆ ಶಾಶ್ವತವಾಗಿರುವ ವಿದ್ಯುತ್ ಕಂಬದಲ್ಲಿ ಪುಟ್ಟ ದೀಪಗಳು ನೇತಾಡುತ್ತದೆ. ಇದರಿಂದ ಕಂಬದ ಬುಡಕ್ಕೆ ಬೆಳಕು ಬರುವುದಿಲ್ಲ. ನಗರದಲ್ಲಿ ಸಾಲು ಸಾಲಾಗಿ ಬೀದಿದೀಪಗಳು ಪ್ರಜ್ವಲಿಸುತ್ತಿದ್ದರೂ, ತೀರ್ಥ ಕ್ಷೇತ್ರದ ಗುಡ್ಡಪ್ರದೇಶದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲ.
ಪಾರ್ವತಿ ಕ್ಷೇತ್ರದಿಂದ ಈಶ್ವರ ದೇವರ ಸನ್ನಿಧಾನಕ್ಕೆ ತೆರಳುವ ಗುಡ್ಡ ಪ್ರದೇಶದಲ್ಲಿ ಸೋಲಾರ್ ಚಾರ್ಜರ್ ಲೈಟ್ ಅಳವಡಿಸಿರುತ್ತಾರೆ. ಆದರೆ ಕ್ಷೇತ್ರದಲ್ಲಿ ಮಂಗಗಳು ಜಾಸ್ತಿ ಇರುವುದರಿಂದ ಸೋಲಾರ್ ರಿಚಾರ್ಜ್ ಮಾಡುವ ಪ್ಯಾನಲ್ ಬೋರ್ಡಿಗೆ ಹಾನಿ ಮಾಡಿದೆ. ಕಬ್ಬಿಣದ ಪೈಪ್‍ಗಳಿಗೂ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿರುವ ಶಿವ ಪಾರ್ವತಿಯರ ಆಕರ್ಷಣೀಯ ಆರಾಧನಾ ತಾಣವಾಗಿರುವ ಈ ಕಾರಿಂಜ ಕ್ಷೇತ್ರದಲ್ಲಿ 60 ವರ್ಷಗಳ ಹಿಂದೆ ಹಾಕಿದ ವಿದ್ಯುತ್ ಕಂಬಗಳು ಈಗಲೂ ಇದ್ದು ಒಮ್ಮೆಯೂ ಅದನ್ನು ಬದಲಾವಣೆ ಮಾಡಿಲ್ಲ. ಅದರ ನಿರ್ವಹಣೆಯನ್ನೂ ಮಾಡದೆ ಇರುವ ಕಾರಣ ಆಗಾಗ ತಂತಿಗಳು ನೇತಾಡುತ್ತಲೇ ಇರುವುದು ಕಂಡು ಬರುತ್ತದೆ. ಇದರ ನಿರ್ವಹಣೆ ಸಮಪರ್ಕವಾಗಿಲ್ಲದೆ ಇರುವುದರಿಂದ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನಾನುಕೂಲವಾಗಿದೆ.
ಕಾರಿಂಜ ಕ್ಷೇತ್ರದಲ್ಲಿ ಕೆಲವು ವಿದ್ಯುತ್ ಕಂಬಗಳು ಅಪಾಯದ ಸ್ಥಿತಿಯಲ್ಲಿದೆ. ಆದಷ್ಟು ಬೇಗ ಅದನ್ನು ಸುಸ್ಥಿತಿಗೆ ತರುವುದು ಅನಿವಾರ್ಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದಿಂದ ಮೆಸ್ಕಾಂ ಇಲಾಖೆಗೆ ಸಮಸ್ಯೆಯ ಬಗ್ಗೆ ಪತ್ರ ವ್ಯವಹಾರ ನಡೆದಿರುತ್ತದೆ. ಇಷ್ಟರ ತನಕ ಯಾವುದೇ ಕೆಲಸಗಳಾಗಿಲ್ಲ. ಮುಂದಿನ ದಿನಗಳಲ್ಲಿ ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ, ಮುಂದಿನ ಜಾತ್ರೆಯೊಳಗೆ ಸರಿಮಾಡಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ ಕ್ಷೇತ್ರದ ಆಡಳಿತಾಧಿಕಾರಿ ಸಚಿನ್ ಕುಮಾರ್ ಅವರು.
ಕಾರಿಂಜ ಕ್ಷೇತ್ರದಲ್ಲಿರುವ ವಿದ್ಯುತ್ ಕಂಬಗಳು ತುಂಬಾ ದುಸ್ಥಿತಿಯಲ್ಲಿದ್ದು, ಹಳೆ ಕಾಲದ ಕಬ್ಬಿಣದ ವಿದ್ಯುತ್ ಕಂಬಗಳೇ ಇವೆ. ಅಷ್ಟೇ ಅಲ್ಲದೇ ಎಲ್ಲಾ ಕಂಬಗಳೂ ವಾಲಿಕೊಂಡಿರುತ್ತದೆ. ಕಂಬಗಳು ತುಕ್ಕು ಹಿಡಿದಿದೆ. ತಂತಿಗಳು ನೇತಾಡುತ್ತಿದೆ. ಅದರ ಸಾಮರ್ಥ್ಯವೂ ಕಡಿಮೆಯಾಗಿರುತ್ತದೆ. ಕಂಬದಲ್ಲಿರುವ ತಂತಿಗಳು ಆಗಾಗ ಬೀಳುತ್ತಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ನೀಡಿದರೂ ಭರವಸೆ ಮಾತ್ರ ನೀಡಲಾಗುತ್ತದೆ ಹೊರತು ಸಮಸ್ಯೆ ಪರಿಹಾರವಾಗುವುದಿಲ್ಲ. ಎನ್ನುತ್ತಾರೆ ಸ್ಥಳೀಯರು.
0 comments:
Post a Comment