ಮಂಗಳೂರು, ಜನವರಿ 20, 2025 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕಿನ ತಲಪಾಡಿ ಸಮೀಪದ ಕೆ ಸಿ ರೋಡು ಜಂಕ್ಷನ್ನಿನಲ್ಲಿ ಕಾರ್ಯಾಚಾರಿಸುತ್ತಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಸೋಮವಾರ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮುರುಗನ್, ಪ್ರಕಾಶ್ ಅಲಿಯಾಸ್ ಜೈಸ್ವಾ ಹಾಗೂ ಮಣಿವಣ್ಣನ್ ಎಂದು ಗುರುತಿಸಲಾಗಿದೆ. ಸುಮಾರು 12 ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಸೋಮವಾರ ಮಧುರೈ ಸಮೀಪ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ 2 ಗೋಣಿ ಚೀಲ, ತಲ್ವಾರ್, 2 ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳು ತಮಿಳುನಾಡಿನ ತಿರುನೆಲ್ವೇಲಿ ಮೂಲದವರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜನವರಿ 17 ರಂದು ಶುಕ್ರವಾರ ಮಧ್ಯಾಹ್ನ ಕೆ.ಸಿ.ರೋಡಿನಲ್ಲಿರುವ ಸಹಕಾರಿ ಬ್ಯಾಂಕಿಗೆ ನುಗ್ಗಿದ ದರೋಡೆಕೋರರು ಸುಮಾರು 12 ಕೋಟಿ ರೂಪಾಯಿ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದರು.
ಮಹಾರಾಷ್ಟ್ರದ ಕಾರು ಬಳಸಿ ಕೋಟೆಕಾರು ಬ್ಯಾಂಕ್ ದರೋಡೆ ಕೃತ್ಯವೆಸಗಿದ್ದರು. ಬ್ಯಾಂಕ್ ದರೋಡೆ ಬಳಿಕ ತಮಿಳುನಾಡಿನ ತಿರುನೆಲ್ವೇಲಿಗೆ ಆರೋಪಿಗಳು ಪರಾರಿಯಾಗಿದ್ದರು.
0 comments:
Post a Comment