ಬೆಂಗಳೂರು, ಜನವರಿ 07, 2025 (ಕರಾವಳಿ ಟೈಮ್ಸ್) : ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಸವಲಾಗಿ ಪೊಲಿಸ್ ಠಾಣಾ ವ್ಯಾಪ್ತಿಯ ತೊಡಲ್ ಬಾಗಿ ಗ್ರಾಮದಲ್ಲಿ ಶ್ರೀರಾಮ ಸೇನಾ ವತಿಯಿಂದ ಆರು ದಿನಗಳ ಕಾಲ ಬಂದೂಕಿನ ಮೂಲಕ ಯುದ್ದ ಕಲೆಯ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಲ್ ಇಂಡಿಯಾ ಲಾಯರ್ಸ್ ಎಸೋಸಿಯೇಶನ್ ಫಾರ್ ಜಸ್ಟೀಸ್ (ಎ ಐ ಎಲ್ ಎ ಜೆ) ರಾಜ್ಯ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಮಿತಿ, ವ್ಯಕ್ತಿತ್ವ ವಿಕಸನ ಹಾಗೂ ಸ್ವಂ ರಕ್ಷಣೆಗಾಗಿ ಶಸ್ತ್ರಾಸ್ತ್ರ ತರಬೇತಿ ನೀಡಲಾಗಿದೆ ಎಂಬುದಾಗಿ ವರದಿಯಾಗಿದ್ದು ಶಿಬಿರದಲ್ಲಿ ದಂಡ ಪ್ರಯೋಗ, ಏರ್ ಗನ್ ಮೂಲಕ ಗನ್ ತರಬೇತಿ ಟಾರ್ಗೆಟ್ ಮಾಡಿ ಗುರಿ ಇಟ್ಟು ಗುಂಡು ಹೊಡೆಯುವುದು ಮುಂತಾದ ತರಬೇತಿ ನೀಡಿರುವ ಬಗ್ಗೆ ವರದಿಯಾಗಿದೆ. ಶಸ್ತ್ರಾಸ್ತ್ರ ತರಬೇತಿ ನೀಡುವುದು ಹಾಗೂ ಶಸ್ತ್ರಾಸ್ತ್ರ ಹೊಂದುವುದು ಶಸ್ತ್ರಾಸ್ತ್ರ ಕಾಯ್ದೆಯ ಪ್ರಕಾರ ಅಪರಾದವಾಗಿದ್ದು, ಅಲ್ಲದೆ ಇಂತಹ ಘಟನೆಗಳು ಬಹಳ ಅಪಾಯಕಾರಿ ಬೆಳವಣಿಗೆಗಳಾಗಿವೆ ಹಾಗೂ ರಾಜ್ಯದ ಜನತೆ ಆತಂಕಪಡುವ ಘಟನೆಯಾಗಿರುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ರಾಜ್ಯದಲ್ಲಿ ಈ ಹಿಂದೆ ಕೂಡಾ ಬಲಪಂಥೀಯ ಸಂಘಟನೆಗಳಿಂದ ಹಲವಾರು ಕಡೆಗಳಲ್ಲಿ ಇಂತಹ ಶಿಬಿರಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಅಲ್ಲದೆ ಹಲವಾರು ಕಡೆ ಮಾನವ ಹಕ್ಕು ಕಾರ್ಯಕರ್ತರ ಮೇಲೆ ಪ್ರಗತಿಪರ ಹೋರಾಟಗಾರರ ಮೇಲೆ ದಾಳಿಗಳು, ನೈತಿಕ ಪೊಲಿಸ್ ಗಿರಿ, ಗುಂಪು ಹತ್ಯೆ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಎಂ ಎಂ ಕಲ್ಬುರ್ಗಿ ಹತ್ಯೆ, ಅಲ್ಪಸಂಖ್ಯಾತರ ಮೇಲೆ ದಾಳಿಗಳು, ಬೆಳಗಾವಿಯಲ್ಲಿ ಅರ್ಬಾಜ್ ಮುಲ್ಲಾ ಹತ್ಯೆ ಮುಂತಾದ ಪ್ರಕರಣಗಳಲ್ಲಿ ಈ ಬಲಪಂಥೀಯ ಸಂಘಟನೆಗಳ ಪಾತ್ರ ಇರುವುದು ಬಹಿರಂಗವಾಗಿದೆ ಎಂದಿರುವ ಲಾಯರ್ಸ್ ಸಮಿತಿ ಈ ಘಟನೆ ಬಗ್ಗೆ ಈವರೆಗೂ ಆಯೋಜಕರ ವಿರುದ್ಧ ಪೊಲಿಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಹಾಗೂ ಭಾಗಲಕೋಟೆ ಎಸ್ಪಿ ಅವರು ಯಾವುದಾದರೂ ಅಹಿತಕರ ಘಟನೆ ನಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವುದು ಮಾದ್ಯಮಗಳಲ್ಲಿ ವರದಿ ಯಾಗಿದೆ. ಎಸ್ಪಿ ಅವರ ಈ ಹೇಳಿಕೆ ಹತಾಶೆಯಿಂದ ಕೂಡಿರುವುದಾಗಿದೆ. ಶಸ್ತ್ರಾಸ್ತ್ರ ತರಬೇತಿ ನೀಡಿದವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕಾಗಿದ್ದು ಈವರೆಗೂ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ಪೊಲಿಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವ ಹಲವು ಘಟನೆಗಳು ನಡೆದಿದೆ. ಪ್ಯಾಲೇಸ್ತೀನ್ ಪರ ಶಾಂತಿಯುತ ಪ್ರತಿಭಟನೆ ನಡೆಸಿದ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ಬಾಗಲಕೋಟೆಯಲ್ಲಿ ಇಂತಹ ಹಿಂಸಾತ್ಮಕ ರೀತಿಯ ಘಟನೆ ನಡೆದಿದ್ದರೂ ಪೊಲಿಸ್ ಇಲಾಖೆ ಹಾಗೂ ಸರಕಾರ ಮೌನವಾಗಿರುವುದು ಖಂಡನೀಯವಾಗಿದೆ. ಇಂತಹ ಘಟನೆಗಳಿಂದ ಮುಂದೆ ಇಲ್ಲಿ ತರಬೇತಿ ಪಡೆದ ಯುವಕರು ರಾಜ್ಯದಲ್ಲಿ ಹಿಂಸೆ ನಡೆಸಿ ಶಾಂತಿಗೆ ಭಂಗ ತರುವ ಅಪಾಯಗಳಿದ್ದು, ಅಲ್ಲದೆ ತೀವ್ರಗಾಮಿ ಹಿಂದುತ್ವದಿಂದ ಪ್ರಭಾವಿತರಾಗಿ ಮಿಲಿಟರಿ ರೀತಿಯಲ್ಲಿ ಮುಂದೆ ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ವಿಚಾರವಾದಿಗಳನ್ನು ಗುರಿಯಾಗಿರಿಸಿಕೊಂಡು ಸಂಘಟಿತ ದಾಳಿಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ ಲಾಯರ್ಸ್ ರಾಜ್ಯ ಸಮಿತಿ ಆರಂಭದಲ್ಲೆ ಇಂತಹವರ ಮೇಲೆ ಕ್ರಮಕೈಗೊಳ್ಳದೆ ಇದ್ದರೆ ಮುಂದೆ ರಾಜ್ಯದಲ್ಲಿ ಜನತೆ ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಂಭವವಿದೆ ಎಂದಿದೆ.
ತಕ್ಷಣ ಪೊಲಿಸ್ ಇಲಾಖೆ ಶಸ್ತ್ರಾಸ್ತ್ರ ತರಬೇತಿ ಶಿಬಿರ ಅಯೋಜಿಸಿದವರ ಮೇಲೆ ಹಾಗೂ ಅಲ್ಲಿ ಭಾಗವಹಿಸಿದವರ ಮೇಲೆ ಸೆಕ್ಷನ್ 25 ಮತ್ತು 27 ಶಸ್ತ್ರಾಸ್ತ್ರ ಕಾಯ್ದೆ 1959 ಮತ್ತು ಸೆಕ್ಷನ್ 61 ಮತ್ತು 189 ಭಾರತೀಯ ನ್ಯಾಯ ಸಂಹಿತಾ 2023 ರಂತೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ ಹಾಗೂ ರಾಜ್ಯದಲ್ಲಿ ಶಾಂತಿ ಕಾಪಾಡಲು ಇಂತಹ ಬಲ ಪಂಥಿಯ ಶಕ್ತಿಗಳ ಮೇಲೆ ನಿಗಾ ಇಡುವಂತೆಯೂ ಒತ್ತಾಯಿಸಿದೆ.
0 comments:
Post a Comment