ಮಂಗಳೂರು, ಜನವರಿ 22, 2025 (ಕರಾವಳಿ ಟೈಮ್ಸ್) : ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕೆಸಿರೋಡಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಆರೋಪಿ ಕಣ್ಣನ್ ಮಣಿ (36) ಎಂಬಾತನ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ.
ಈ ವೇಳೆ ಕಣ್ಣನ್ ಮಣಿ ಕಾಲಿಗೆ ಗುಂಡೇಟು ತಗಲಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಕರ್ನಾಟಕ-ಕೇರಳ ಗಡಿಯ ತಲಪಾಡಿ ಗ್ರಾಮದ ಅಲಂಕಾರು ಗುಡ್ಡೆ ಬಳಿ ಸಂಜೆ 4.20 ಸುಮಾರಿಗೆ ಈ ಘಟನೆ ನಡೆದಿದೆ.
ಉಳ್ಳಾಲ ಇನ್‍ಸ್ಪೆಕ್ಟರ್ ಬಾಲಕೃಷ್ಣ ಅವರು ತಂಡದ ಜೊತೆ ಆರೋಪಿ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದರು. ಪರಾರಿ ಉದ್ದೇಶದಿಂದ ಕಣ್ಣನ್ ಮಣಿ, ಅಲ್ಲೇ ಬಿದ್ದಿದ್ದ ಬಿಯರ್ ಬಾಟಲಿ ಒಡೆದು ಪೊಲೀಸರಾದ ಆಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತನಿಖಾಧಿಕಾರಿ ಉಳ್ಳಾಲ ಇನ್‍ಸ್ಪೆಕ್ಟರ್ ಬಾಲಕೃಷ್ಣರಿಗೂ ಇರಿಯಲು ಯತ್ನಿಸಿದ್ದಾನೆ. ಹಲ್ಲೆ ಮುಂದುವರಿಸಿದಾಗ ಸಿಸಿಬಿ ಇನ್‍ಸ್ಪೆಕರ್ ರಫೀಕ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆತನನ್ನು ಆಸತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ ಇನ್ ಸೆಕ್ಟರ್ ಬಾಲಕೃಷ್ಣ, ಸಿಸಿಬಿ ಕಾನ್‍ಸ್ಟೇಬಲ್ ಆಂಜನಪ್ಪ, ಉಳ್ಳಾಲ ಠಾಣೆ ಕಾನ್‍ಸ್ಟೇಬಲ್ ನಿತಿನ್ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆಯ ಯೇನಪೊಯಾ ಆಸ್ಪತ್ರೆಗೆ ದಾಲಿಸಲಾಗಿದೆ.
ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡವು ಜನವರಿ 20 ರಂದು ತಮಿಳುನಾಡಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಲ್ಲಿ ಒಬ್ಬರಾದ ಮುಂಬೈನ ಚೆಂಬೂರಿನ ತಿಲಕ್ ನಗರದ ನಿವಾಸಿ ಕಣ್ಣನ್ ಮಣಿ (36) ಅವರನ್ನು ಬಂಧಿಸಿದ ನಂತರ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಜನವರಿ 17 ರಂದು ಶುಕ್ರವಾರ ಮಧ್ಯಾಹ್ನ 1 ರಿಂದ 1.20 ರ ನಡುವೆ ಕೆ.ಸಿ.ರೋಡಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ದರೋಡೆ ನಡೆದಿತ್ತು. ಆರೋಪಿಗಳು ಬ್ಯಾಂಕ್ ನೌಕರರನ್ನು ಬೆದರಿಸಿ ನಗದು ಮತ್ತು ಬೆಲೆಬಾಳುವ ಚಿನ್ನಾಭರಣ ಲೂಟಿಗೈದು ಪರಾರಿಯಾಗಿದ್ದರು.
0 comments:
Post a Comment