ಬಂಟ್ವಾಳ, ಜನವರಿ 09, 2025 (ಕರಾವಳಿ ಟೈಮ್ಸ್) : ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಚಿನ್ನಾಭರಣ ಸಾಲದ ಮೇಲೆ ನಡೆದಿದೆ ಎನ್ನಲಾದ ಕೆಲವರ ದೂರು-ಅಪಪ್ರಚಾರಗಳು ಬ್ಯಾಂಕ್ ಆಡಳಿತ ಮಂಡಳಿ ವಿರುದ್ದ ತೇಜೋವಧೆ ಮಾಡುವ ದುರುದ್ದೇಶ ಹಾಗೂ ಮುಂಬರುವ ಫೆಬ್ರವರಿ 9 ರಂದು ನಡೆಯುವ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯ ದೃಷ್ಟಿಯಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡುವ ದುರುದ್ದೇಶದಿಂದ ಕೂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್ ಹೇಳಿದ್ದಾರೆ.
ಬ್ಯಾಂಕಿನ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಸಂಘದ ಪಡೀಲ್ ಶಾಖಾ ಗ್ರಾಹಕಿಯೊಬ್ಬರು ಪರಿಚಯಿಸಿದ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಅಬೂಬಕ್ಕರ್ ಸಿದ್ದೀಕ್ ಎಂಬವರು ಪಡೀಲ್ ಶಾಖೆಯಲ್ಲಿ ಚಿನ್ನದ ಬಳೆಗಳನ್ನು ಅಡವಿಟ್ಟು 19 ಚಿನ್ನಾಭರಣ ಈಡಿನ ಖಾತೆಗಳಲ್ಲಿ 2.11 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಬ್ಯಾಂಕ್ ನಿಯಮಾವಳಿ ಪ್ರಕಾರ ಚಿನ್ನಾಭರಣ ಈಡಿನ ಮೇಲೆ ನೀಡುವಂತಹ ಸಾಲ ತ್ವರಿತ ಸಾಲ ಎಂದು ಪರಿಗಣಿಸಲ್ಪಡುತ್ತದೆ. ಈ ಸಾಲವನ್ನು ಶಾಖಾ ಪ್ರಬಂಧಕರು ಚಿನ್ನಾಭರಣ ಪರೀಕ್ಷಿಸುವ ಅಧಿಕೃತ ಮೌಲ್ಯಮಾಪಕರ ವರದಿಯಂತೆ ಬಿಡುಗಡೆಗೊಳಿಸಿದ್ದಾರೆ. ಈ ಪ್ರಕ್ರಿಯೆ ನಿಯಮಾನುಸಾರ ನಡೆದಿದೆ. ಸಹಕಾರಿ ಸಂಘಗಳು ನೀಡುವ ಇತರ ಸಾಲಗಳು ಬ್ಯಾಂಕಿನ ಆಡಳಿತ ಮಂಡಳಿಯ ಅನುಮೋದನೆ ಮೇರೆಗೆ ನೀಡಲಾಗುತ್ತಿದ್ದರೆ, ಚಿನ್ನಾಭರಣಗಳ ಮೇಲಿನ ಸಾಲ ಕೇವಲ ಚಿನ್ನಾಭರಣಗಳ ತೂಕದ ಆಧಾರದಲ್ಲಿ ಮೂಲ ಬೆಲೆಯ ಶೇ 85ರಷ್ಟು ಸಾಲ ನೀಡಲಾಗುತ್ತದೆ. ಅದರ ಜವಾಬ್ದಾರಿ ಮೌಲ್ಯಮಾಪಕರು ಹಾಗೂ ಶಾಖಾಧಿಕಾರಿ ಮೇಲಿರುತ್ತದೆ ಎಂಧರು.
ಈ ವಿಚಾರಕ್ಕೆ ಸಂಬಂಧಿಸಿ ಅಬೂಬಕ್ಕರ್ ಸಿದ್ದೀಕ್ ಅವರಿಗೆ ಸೂಕ್ತ ನೋಟೀಸ್ ನೀಡಿ ಪ್ರತಿಕ್ರಯಿಸದೆ ಇದ್ದಾಗ ಅಡವಿರಿಸಿದ ಚಿನ್ನಾಭರಣಗಳನ್ನು ಬ್ಯಾಂಕ್ ನಿಯಮಾನುಸಾರ ಏಲಂ ನಡೆಸಿ ಆಭರಣ ಸಾಲ ಚುಕ್ತಾ ಆಗಿರುತ್ತದೆ. ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮೌಲ್ಯಮಾಪಕ ವಿವೇಕ ಆಚಾರ್ಯ ಅವರು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿ ಚಿನ್ನಾಭರಣ ಪಡೆದಿದ್ದರು. ಸದ್ರಿ ದೂರನ್ನು ತನಿಖೆ ನಡೆಸಿದ ಅಧಿಕಾರಿಗಳು ಸಹಕಾರಿ ಸಂಘಕ್ಕೆ ಯಾವುದೇ ಮೋಸ ಆಗಿಲ್ಲ ಎಂಬ ನಿಲುವಿಗೆ ಬಂದು ದೂರನ್ನು ವಜಾಗೊಳಿಸಿದ್ದರು. ಶಾಖೆಗಳಲ್ಲಿ ಆಭರಣ ಈಡಿನ ಮೇಲೆ ಮಿತಿಗಿಂತ ಹೆಚ್ಚು ಸಾಲ ಮಂಜೂರಾತಿ ಮಾಡಿದ ಮತ್ತು ಇತರ ವಿಷಯಗಳಲ್ಲಿ ಕರ್ತವ್ಯ ಲೋಪ ಸಂಶಯ ಬಂದ ಕಾರಣ ಶಾಖಾ ವ್ಯವಸ್ಥಾಪಕ ಕರ್ತವ್ಯ ಲೋಪ ಎಂದು ಪರಿಗಣಿಸಿ ಅವರನ್ನು ದೀರ್ಘಾವಧಿ ರಜೆ ಮೇಲೆ ಕಳಿಸಲಾಗಿದೆ ಎಂದ ಸುರೇಶ್ ಕುಲಾಲ್ ಈ ವಿಷಯ ತಿಳಿದಿದ್ದ ಲೋಕನಾಥ್ ಅವರು ಈಗಿನ ಆಡಳಿತ ಮಂಡಳಿ ಮೇಲೆ ವೈಯುಕ್ತಿಕ ದ್ವೇಷ ಹಾಗೂ ಫೆ 9ರ ಚುನಾವಣೆ ದೃಷ್ಟಿಯಿಂದ ಸೆನ್ ಪೊಲೀಸ್ ಠಾಣೆಯಲ್ಲಿ ವಿಚಾರಕ್ಕೆ ಸಂಬಂಧಪಡದ ವ್ಯಕ್ತಿಗಳ ವಿರುದ್ದ ಸುಳ್ಳು ಆಪಾದನೆ ಮಾಡಿ ದೂರು ಸಲ್ಲಿಸಿರುತ್ತಾರೆ. ಈ ದೂರಿನ ಬಗ್ಗೆ ಕಾನೂನು ಬಾಹಿರ ಎಂಬ ಪ್ರಾಥಮಿಕ ಹಂತದಲ್ಲಿ ಮನಗಂಡು ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ 1980 ರಲ್ಲಿ ನೋಂದಣಿಗೊಂಡು 1981 ರ ಮೇ 24 ರಂದು ಅಂದಿನ ರಾಜ್ಯ ಹಣಕಾಸು, ಪ್ರವಾಸೋದ್ಯಮ ಸಚಿವ ಎಂ ವೀರಪ್ಪ ಮೊಯಿಲಿ ಉದ್ಘಾಟಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಸಮಾಜರತ್ನ ದಿವಂಗತ ಡಾ ಅಮ್ಮೆಂಬಳ ಬಾಳಪ್ಪ ಅವರ ನೇತೃತ್ವದಲ್ಲಿ ಸಹಕಾರಿ ಧುರೀಣ ಹೂವಯ್ಯ ಮೂಲ್ಯ ಅವರ ಸಾರಥ್ಯದಲ್ಲಿ ಈ ಸಹಕಾರಿ ಸಂಘ ಆರಂಭಗೊಂಡಿದೆ ಎಂದ ಅಧ್ಯಕ್ಷ ಸುರೇಶ್ ಕುಲಾಲ್, ಪ್ರಸ್ತುತ ಬ್ಯಾಂಕ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿ ಒಳಗೊಂಡು 16 ಶಾಖೆಗಳನ್ನು ಹೊಂದಿ ವರ್ಷದಿಂದ ವರ್ಷಕ್ಕೆ ವ್ಯವಹಾರ ಅಭಿವೃದ್ದಿಗೊಂಡು ಪ್ರಸ್ತುತ ವರ್ಷದಲ್ಲಿ 982.54 ಕೋಟಿ ವ್ಯವಹಾರ ನಡೆಸಿ, 5.71 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೆ 17 ರಷ್ಟು ಡೆವಿಡೆಂಟ್ ಘೋಷಿಸಲಾಗಿದೆ ಎಂದು ಬ್ಯಾಂಕಿನ ಇತಿಹಾಸ ಮೆಲುಕು ಹಾಕಿದರು. ಬ್ಯಾಂಕಿನ ಆಡಳಿತ ಮಂಡಳಿಯ ವಿರುದ್ದ ಸಂಚು ನಡೆಸುತ್ತಿರುವ ಲೋಕನಾಥ್ ಡಿ ಹಾಗೂ ಇತರರು ಇತ್ಯರ್ಥಗೊಂಡ ಪ್ರಕರಣದಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದು,
ಇದನ್ನು ಬ್ಯಾಂಕಿನ ಸದಸ್ಯರು ಹಾಗೂ ಗ್ರಾಹಕರು ನಂಬದಂತೆ ಕೋರುತ್ತೇವೆ ಎಂದು ಸುರೇಶ್ ಕುಲಾಲ್ ವಿನಂತಿಸಿದರು.
ಈ ಸಂದರ್ಭ ಬ್ಯಾಂಕ್ ಉಪಾಧ್ಯಕ್ಷ ಪದ್ಮನಾಭ ವಿ, ನಿರ್ದೇಶಕರಾದ ಅರುಣ್ ಕುಮಾರ್, ಶ್ರೀಮತಿ ಜಯಂತಿ, ಜನಾರ್ದನ ಬೊಂಡಾಲ, ಮಚ್ಚೇಂದ್ರ ಸಾಲ್ಯಾನ್ ಮೊದಲಾದವರು ಜೊತೆಗಿದ್ದರು.
0 comments:
Post a Comment