ಮಂಗಳೂರು, ಜನವರಿ 17, 2025 (ಕರಾವಳಿ ಟೈಮ್ಸ್) : ಬೀದರ್ ಎಟಿಎಂ ದರೋಡೆ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಮಂಗಳೂರು ಹೊರ ವಲಯದ ಉಳ್ಳಾಲ ತಾಲೂಕಿನ ಕೆ ಸಿ ರೋಡು ಜಂಕ್ಷನ್ನಿನಲ್ಲಿ ಅಂತಹುದೇ ಮತ್ತೊಂದು ಬ್ಯಾಂಕ್ ದರೋಡೆ ಪ್ರಕರಣ ಶುಕ್ರವಾರ ಮಟ ಮಟ ಮಧ್ಯಾಹ್ನ ವೇಳೆ ನಡೆದಿದೆ.
ಕಾರಿನಲ್ಲಿ ಆಗಮಿಸಿದ ದರೋಡೆಕೋರರರು ಬರೊಬ್ಬರಿ 12 ಕೋಟಿ ರೂಪಾಯಿ ಮೌಲ್ಯದ ನಗದ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೀದರಿನಲ್ಲಿ ಎಸ್‍ಬಿಐ ಎಟಿಎಂ ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಇಬ್ಬರು ಆಗಂತುಕರು ಸಿಎಂಎಸ್ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿ ಸುಮಾರು 93 ಲಕ್ಷ ರೂಪಾಯಿ ಇದ್ದ ಹಣದ ಬಾಕ್ಸ್ ಹೊತ್ತು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಇನ್ನೂ ಹಸಿರಾಗಿರುವಂತೆಯೇ ಇತ್ತ ಮಂಗಳೂರಿನಲ್ಲೂ ಇಂತಹುದೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದ್ದು ಜನರನ್ನು ಆತಂಕ್ಕೀಡಾಗುವಂತೆ ಮಾಡಿದೆ. ಅದೂ ಕೂಡಾ ರಾಜ್ಯದ ಮುಖ್ಯಮಂತ್ರಿ ಜಿಲ್ಲಾ ಪ್ರವಾಸದಲ್ಲಿರುವ ಸಂದರ್ಭದಲ್ಲೇ ದುಷ್ಕರ್ಮಿಗಳು ಈ ದರೋಡೆ ಕೃತ್ಯಕ್ಕೆ ಧೈರ್ಯ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕೆ ಸಿ ರೋಡು ಜಂಕ್ಷನ್ನಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾಡಹಗಲೇ ಕೋಟೆಕಾರು ಸಹಕಾರಿ ಬ್ಯಾಂಕಿಗೆ ನುಗ್ಗಿದ ದರೋಡೆಕೋರರು ಸುಮಾರು 12 ಕೋಟಿ ರೂಪಾಯಿ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಒಟ್ಟು ಆರು ಜನರಿದ್ದ ದರೋಡೆಕೋರರ ತಂಡವು ಕೋಟೆಕಾರ್ ಬ್ಯಾಂಕ್ ಕೆ ಸಿ ರೋಡು ಶಾಖೆಗೆ ನುಗ್ಗಿ, ಪಿಸ್ತೂಲು ಮತ್ತು ತಲವಾರು ತೋರಿಸಿ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೆÇಲೀಸರು ಅದರ ಭದ್ರತೆಗೆ ತೆರಳಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೆÇಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಮುಸ್ಲಿಂ ಬಾಹುಳ್ಯ ಇರುವ ಕೆ ಸಿ ರೋಡು ಜಂಕ್ಷನ್ನಿನಲ್ಲಿ ಶುಕ್ರವಾರ ಮಧ್ಯಾಹ್ನ ಎಲ್ಲರೂ ಶುಕ್ರವಾರದ ವಿಶೇಷ ಪ್ರಾರ್ಥನೆಗೆ ತೆರಳಿದ್ದ ಕಾರಣ ಜಂಕ್ಷನ್ನಿನಲ್ಲಿ ಜನಸಂಚಾರ ವಿರಳವಾಗಿತ್ತು. ಇದೇ ಸಮಯ ನೋಡಿಕೊಂಡು ದರೋಡೆಕೋರರ ಗುಂಪು ಬ್ಯಾಂಕಿಗೆ ದಾಳಿ ನಡೆಸಿದೆ. ದಾಳಿ ವೇಳೆ ಗ್ಯಾಂಗಿನಲ್ಲಿ ಆರು ಜನರಿದ್ದು, ಈ ಪೈಕಿ ಐವರು ಬ್ಯಾಂಕಿಗೆ ನುಗ್ಗಿದರೆ ಓರ್ವ ದುಷ್ಕರ್ಮಿ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಅವರಿಗಾಗಿ ಕಾದಿದ್ದ. ಬ್ಯಾಂಕಿನೊಳಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲು ಮತ್ತು ತಲವಾರು ತೋರಿಸಿ ಬ್ಯಾಂಕಿನಿಂದ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಕೋಟೆಕಾರು ಸಹಕಾರಿ ಬ್ಯಾಂಕ್ ಕಟ್ಟಡದ ಮೊದಲ ಮಹಡಿಯಲ್ಲಿತ್ತು. ಕೆಳಗೆ ಬೇಕರಿಯಲ್ಲಿ ಕೆಲ ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು. ಬ್ಯಾಂಕಿನಲ್ಲಿ ಗಲಾಟೆ ಕೇಳಿ ವಿದ್ಯಾರ್ಥಿಗಳು ಬ್ಯಾಂಕಿನತ್ತ ಓಡಿದ್ದು, ಈ ವೇಳೆ ದುಷ್ಕರ್ಮಿಗಳು ಅವರಿಗೆ ಪಿಸ್ತುಲು-ತಲವಾರು ತೋರಿಸಿ ಬೆದರಿಸಿ ಓಡಿಸಿದ್ದಾರೆ. ಆಗ ಕೆಳಗೆ ಬಂದ ವಿದ್ಯಾರ್ಥಿಗಳು ಜೋರಾಗಿ ಕೂಗಿ ಸ್ಥಳೀಯರನ್ನು ಕರೆದಿದ್ದಾರೆ. ಆದರೆ ಇದಾವುದನ್ನೂ ಲೆಕ್ಕಿಸದ ದುಷ್ಕರ್ಮಿಗಳು ಹಣ-ಚಿನ್ನಾಭರಣ ಹೊತ್ತು ತಾವು ತಂದಿದ್ದ ಫಿಯಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದರೋಡೆಕೋರರ ಗ್ಯಾಂಗ್ ಮಂಗಳೂರಿನತ್ತ ಪರಾರಿಯಾಗಿದೆ ಮತ್ತು ದರೋಡೆಕೋರರು ಕನ್ನಡ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
0 comments:
Post a Comment