ಬಂಟ್ವಾಳ, ಜನವರಿ 14, 2025 (ಕರಾವಳಿ ಟೈಮ್ಸ್) : ನಾವು ಯಾವತ್ತೂ ಬೇರ್ಪಡಿಸುವವರಾಗಬಾರದು. ಜೋಡಿಸುವವರಾಗಬೇಕು ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಡಿ ಅರ್ಚನಾ ಭಟ್ ಹೇಳಿದರು.
ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಹಾಗೂ ಚಿಣ್ಣರಲೋಕ ಸೇವಾಬಂಧು ಆಶ್ರಯದಲ್ಲಿ ಬಿ ಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಬಹುಸಂಸ್ಕøತಿ ಸಂಭ್ರಮ ಹಾಗೂ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನೂರಾರು ಭಾಷಾ ವೈವಿದ್ಯತೆಗಳಿದ್ದು, ಅವುಗಳನ್ನು ಒಂದೇ ವೇದಿಕೆಯಲ್ಲಿ ತರುವುದು ಇಂದಿನ ಅನಿವಾರ್ಯತೆಯಾಗಿದೆ. ಇದರಿಂದ ನಮ್ಮೊಳಗಿನ ಬೇಧವನ್ನು ಮರೆತು ಭಾರತೀಯರಾಗಿ ಬಾಳುವುದಕ್ಕೆ ಸಾಧ್ಯ ಎಂದರು.
ಭಾಷೆ ಮಾನವನ ಸಂವಹನ ಮಾಧ್ಯಮವಾಗಿದ್ದು, ಕರಾವಳಿಯು ಅನೇಕ ಭಾಷಾ ವೈವಿಧ್ಯತೆಗಳಿಂದ ಕೂಡಿದೆ. ಕವಿ ಮಸ್ಸುಗಳು ಒಂದಾಗಿ ತಮ್ಮ ಭಾಷೆಯ ಮೂಲಕ ಅನುಭವವನ್ನು ಬಿಚ್ಚಿಟ್ಟು ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ ಎಂದವರು ಹೇಳಿದರು.
ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್, ಅರೆ ಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬಂಟ್ವಾಳ ಪಿಡ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಶುಭ ಹಾರೈಸಿದರು.
ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಬೋಳಂತೂರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಪುಷ್ಪಾವತಿ ಭಾಗವಹಿಸಿದ್ದರು. ಇದೇ ವೇಳೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರನ್ನು ಗೌರವಿಸಲಾಯಿತು. ಚಿಣ್ಣರ ಲೋಕ ಸೇವಾ ಟ್ರಸ್ಟ್ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಿವಿಧ ಭಾಷಾ ಕವಿಗಳಾದ ವಿಜಯ ಬಿ ಶೆಟ್ಟಿ ಸಾಲೆತ್ತೂರು (ತುಳು), ಸಲೋಮಿ ಡಿಸೋಜ ಮೊಗರ್ನಾಡು (ಕೊಂಕಣಿ), ಜಯಾನಂದ ಪೆರಾಜೆ (ಕನ್ನಡ), ಅಶ್ರಫ್ ಅಪೋಲೋ ಕಲ್ಲಡ್ಕ (ಬ್ಯಾರಿ), ಉದಯ ಭಾಸ್ಕರ್ ಸುಳ್ಯ (ಅರೆ ಭಾಷೆ) ಹಾಗೂ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ (ಕೊಡವ) ಅವರುಗಳು ತಮ್ಮ ಕವನಗಳನ್ನು ವಾಚಿಸಿದರು. ಬಳಿಕ ವಿವಿಧ ಸಾಹಿತ್ಯ ಅಕಾಡೆಮಿಗಳ ಪ್ರಾಯೋಜಕತ್ವದಲ್ಲಿ ಕಂಗೀಲು ನೃತ್ಯ, ಕೊಂಕಣಿ ನೃತ್ಯ, ದಫ್ ಪ್ರದರ್ಶನ, ಯಕ್ಷ ನಾಟ್ಯ ವೈಭವ, ಕೊಡವ ಉಮ್ಮತಾಟ್ ನೃತ್ಯ ಹಾಗೂ ಅರೆ ಭಾಷಾ ನೃತ್ಯ ವೈಭವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಜ್ಯೋತಿಷಿ ಅನಿಲ್ ಪಂಡಿತ್ ಸ್ವಾಗತಿಸಿ, ಸ್ವಾಗತ ಸಮಿತಿ ಸದಸ್ಯ ಮಾಲಿಕ್ ಕೊಳಕೆ ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಹಾಗೂ ಎಚ್ ಕೆ ನಯನಾಡು ಪ್ರತ್ಯೇಕ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment