ಬಂಟ್ವಾಳ, ಜನವರಿ 01, 2025 (ಕರಾವಳಿ ಟೈಮ್ಸ್) : ಉಳ್ಳಾಲ ಕ್ಷೇತ್ರದ ಪ್ರಮುಖ ಪಟ್ಟಣಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ನಿಟ್ಟಿನಲ್ಲಿ ತಾಲೂಕಿನ ಸಜಿಪಮುನ್ನೂರು ಗ್ರಾಮದ ಆಲಾಡಿಯಲ್ಲಿ ನಿರ್ಮಾಣಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಜಾಕ್ ವೆಲ್ ನಿಂದ ನೀರು ಸರಬರಾಜು ಮಾಡುವ ಸಂದರ್ಭ ಬಿಟ್ಟು ಹೋಗಿದ್ದ ಬಂಟ್ವಾಳ ತಾಲೂಕಿನ ಗ್ರಾಮಗಳನ್ನು ಮತ್ತೆ ಸೇರಿಸಲಾಗಿದೆ. ಈ ಬಗ್ಗೆ ಇಲಾಖಾಧಿಕಾರಿಗಳು ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರಿಗೆ ಪುರಾವೆ ಸಹಿತ ಭರವಸೆ ನೀಡಿದ್ದಾರೆ.
ಆಲಾಡಿ ಜಾಕ್ ವೆಲ್ ನಿಂದ ಉಳ್ಳಾಲ ತಾಲೂಕಿಗೆ ನೀರು ಸರಬರಾಜು ಮಾಡುವ ಬಗ್ಗೆ ಈ ಹಿಂದೆ ಗ್ರಾಮಸ್ಥರ ಆಗ್ರಹದಂತೆ ಬಂಟ್ವಾಳ ತಾಲೂಕಿನ ನದಿ ಕಿನಾರೆಯ ಗ್ರಾಮಗಳಿಗೂ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. ಆದರೆ ಬಳಿಕ ಬಂಟ್ವಾಳ ತಾಲೂಕಿನ ಗ್ರಾಮಗಳನ್ನು ನೀರು ಸಬರಾಜು ಮಾಡುವ ಬಗ್ಗೆ ಕೈಬಿಡಲಾಗಿತ್ತು. ಈ ಬಗ್ಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮೇಲುಸ್ತುವಾರಿಯಲ್ಲಿ ಇಲ್ಲಿನ ರಾಜಕೀಯ ಮುಖಂಡರ ಸಹಿತ ಗ್ರಾಮಸ್ಥರು ಹೋರಾಟ ಮುಂದುವರಿಸಿದ್ದರು.
ರಮಾನಾಥ ರೈ ಅವರ ಸೂಚನೆ ಮೇರೆಗೆ ಇದೀಗ ಬಂಟ್ವಾಳ ತಾಲೂಕಿನ 5 ಗ್ರಾಮಗಳಾದ ಸಜಿಪಮುನ್ನೂರು, ಸಜಿಪಮೂಡ, ಮಂಚಿ, ಬೋಳಂತೂರು ಹಾಗೂ ವೀರಕಂಭ ಗ್ರಾಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಿ ನೀರು ಸರಬರಾಜು ಮಾಡಲು ಅಧಿಕಾರಿಗಳು ಒಪ್ಪಿಕೊಂಡಿದ್ದು, ಈ ಬಗ್ಗೆ ದಾಖಲೆ ಸಹಿತ ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಈಗಾಗಲೇ ಬಾಳೆಪುಣಿವರೆಗೆ ಪೈಪ್ ಲೈನ್ ಕಾಮಗಾರಿ ಹಾದು ಬಂದಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸುಪರಿಂಡೆಂಟ್ ಇಂಜಿನಿಯರ್ ನರಸಿಂಹರಾಜ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಬಂಟ್ವಾಳ ನೀರು ಸರಬರಾಜು ಇಲಾಖಾ ಇಂಜಿನಿಯರ್, ನಟೇಶ್ ಕುಮಾರ್, ಇಂಜಿನಿಯರ್ ಗಳಾದ ರಘುನಾಥ್, ಜಗದೀಶ್, ಕೃಷ್ಣ ಹಾಗೂ ರವಿ, ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ, ಮಾಜಿ ಸದಸ್ಯ ಅಹ್ಮದ್ ಕಬೀರ್, ಡಿಸಿಸಿ ಕಾರ್ಯದರ್ಶಿ ಶಬೀರ್ ಎಸ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment