ಕೆರೆ ರಕ್ಷಣೆ ಮಾಡಿದರೆ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಲಭ್ಯ : ಡಾ ಡಿ ವೀರೇಂದ್ರ ಹೆಗ್ಗಡೆ - Karavali Times ಕೆರೆ ರಕ್ಷಣೆ ಮಾಡಿದರೆ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಲಭ್ಯ : ಡಾ ಡಿ ವೀರೇಂದ್ರ ಹೆಗ್ಗಡೆ - Karavali Times

728x90

26 December 2024

ಕೆರೆ ರಕ್ಷಣೆ ಮಾಡಿದರೆ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಲಭ್ಯ : ಡಾ ಡಿ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮ : 800ನೇ ಕೆರೆ ಹಸ್ತಾಂತರ


ಧರ್ಮಸ್ಥಳ, ಡಿಸೆಂಬರ್ 26, 2024 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಈಗಾಗಲೆ ರಾಜ್ಯದಲ್ಲಿ 800 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು 2025ರ ಎಪ್ರಿಲ್ ಅಂತ್ಯದೊಳಗೆ ಇನ್ನೂ 200 ಕೆರೆಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಘೋಷಿಸಿದರು. 

ಧರ್ಮಸ್ಥಳದ ಧರ್ಮಶ್ರೀ ಸಭಾಭವನದಲ್ಲಿ ಪುನಶ್ಚೇತನಗೊಳಿಸಿದ 800ನೇ ಕೆರೆಯಾದ ಚೌಡನಹಳ್ಳಿ ಕೆರೆಯನ್ನು ಮಾಜಿ ಶಾಸಕ ಲಿಂಗೇಶ್ ಅವರಿಗೆ ಇತ್ತೀಚೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಕೆರೆಯನ್ನು ರಕ್ಷಣೆ ಮಾಡಿದರೆ ಪವಿತ್ರ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ದೊರೆಯುತ್ತದೆ. ಜಲ ಸಂರಕ್ಷಣೆ ಮತ್ತು ಸ್ವಚ್ಛ ಪರಿಸರ ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಕೆರೆಗಳಿಗೆ ಕಸ, ಕಲ್ಮಶ, ತ್ಯಾಜ್ಯಗಳನ್ನು ಎಸೆಯಬಾರದು. ಕೆರೆಗಳಿಗೆ ಕಾಯಕಲ್ಪ ನೀಡುವುದು ಅತ್ಯಂತ ಪ್ರಿಯವಾದ ಕಾಯಕವಾಗಿದ್ದು, ಕೆರೆಯ ಸುತ್ತಲೂ ಹಣ್ಣು ಹಂಪಲಿನ ಗಿಡಗಳನ್ನು ಬೆಳೆಸಬೇಕು ಎಂದವರು ಕರೆ ನೀಡಿದರು. 

ಎಲ್ಲಾ ಕೆಲಸಗಳನ್ನು ಸರಕಾರ, ಸ್ಥಳೀಯಾಡಳಿತಗಳು ಮಾಡಬೇಕೆಂದು ಚಿಂತಿಸದೆ ನಮ್ಮ ಊರು, ನಮ್ಮ ಕೆರೆ ಮತ್ತು ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ ಎಂದು ಡಾ ಹೆಗ್ಗಡೆ ಹೇಳಿದರು.

ಹೇಮಾವತಿ ವಿ ಹೆಗ್ಗಡೆ ಅವರು ಮಾತನಾಡಿ, ಕೆರೆಯು ಆಯಾ ಊರಿನ ಕಲ್ಪವೃಕ್ಷವಾಗಿದ್ದು ಸಕಲ ಜೀವ ರಾಶಿಗಳಿಗೂ ಉಪಯುಕ್ತವಾಗಿದೆ. ಪ್ರತಿ ದೇವಾಲಯದಲ್ಲಿ ಕ್ಷೇತ್ರಪಾಲ ರಕ್ಷಣೆ ಮಾಡಿದಂತೆ ಕೆರೆ ಸಮಿತಿಯವರು ಊರಿನ ಕೆರೆಯನ್ನು ಜತನದಿಂದ ಕಾಪಾಡಬೇಕು ಎಂದು ಸಲಹೆ ನೀಡಿದರು. 

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶಿವಾನಂದ ಕಳವೆ ಅವರು ಕೆರೆಗಳ ಸಂರಕ್ಷಣೆ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡಿದರು. ಕೆರೆ ಸಮಿತಿ ಸದಸ್ಯ ಕಿತ್ತೂರಿನ ಮಲ್ಲಿಕಾರ್ಜುನ ಹುದಲಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಕ ನಿರ್ದೇಶಕ ಅನಿಲ್ ಕುಮಾರ್ ಎಸ್ ಎಸ್ ಉಪಸ್ಥಿತರಿದ್ದರು.

ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿ, ಇಂಜಿನಿಯರ್ ನಿಂಗರಾಜ್ ವಂದಿಸಿದರು. ನಿರ್ದೇಶಕ ಶಿವಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಕೆರೆ ರಕ್ಷಣೆ ಮಾಡಿದರೆ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಲಭ್ಯ : ಡಾ ಡಿ ವೀರೇಂದ್ರ ಹೆಗ್ಗಡೆ Rating: 5 Reviewed By: karavali Times
Scroll to Top