ಮಂಗಳೂರು, ಡಿಸೆಂಬರ್ 23, 2024 (ಕರಾವಳಿ ಟೈಮ್ಸ್) : ರಾಜ್ಯ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಎಲ್ಲಾ ಅಸಂಘಟಿತ ಕಾರ್ಮಿಕ ವರ್ಗದ ಜನರಿಗೂ ದೊರೆಯುವಂತಾಗಬೇಕು. ಯಾರೂ ಕೂಡಾ ಅದರಿಂದ ವಂಚಿತರಾಗದಂತೆ ಕಾಂಗ್ರೆಸ್ ಕಾರ್ಯಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಕರೆ ನೀಡಿದರು.
ಮಂಗಳೂರು-ಮಲ್ಲಿಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬೆನ್ನೆಲುಬು ಶ್ರಮಿಕರ ವರ್ಗ ಹಾಗೂ ಕಾರ್ಮಿಕರ ವರ್ಗವಾಗಿದ್ದು ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕ ವಲಯಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲು ಬೇಕಾದ ದಾಖಲೆಗಳನ್ನು ನಾವೆಲ್ಲರೂ ಸರಿಪಡಿಸಿಕೊಡುವಂತಾಗಬೇಕು ಎಂದರು.
ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯಕ್ಕೆ ಬೀದಿ ಬದಿ ವ್ಯಾಪಾರಿಗಳು, ಟ್ಯಾಕ್ಸಿ ಡ್ರೈವರ್, ಟೈಲರ್, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಇವರೆಲ್ಲರೂ ಸೇರುತ್ತಾರೆ. ಅವರೆಲ್ಲರಿಗೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಯಶೀಲ ಅಡ್ಯಂತಾಯ ಮಾತನಾಡಿ, ಅಸಂಘಟಿತ ಕಾರ್ಮಿಕರ ಬಗ್ಗೆ ನಾವು ವಿಶೇಷ ಕಾಳಜಿಯನ್ನು ವಹಿಸಬೇಕು ಎಂದರು.
ನೂತನ ಕಡಬ ಬ್ಲಾಕ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಸುದರ್ಶನ್ ನಾಯಕ್ ಅವರು ಮಾತನಾಡಿ, ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕ ವರ್ಗದ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕು ಎಂದರು.
ಅಸಂಘಟಿತ ಕಾರ್ಮಿಕ ಕಾಂಗ್ರೆಸ್ಸಿನ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಸುವರ್ಣ, ಯೋಗೀಶ್ ಅವರು ಬ್ಲಾಕಿನ ಮುಂದಿನ ರೂಪುರೇಷೆಯ ಬಗ್ಗೆ ವಿವರಿಸಿದರು.
ಇದೇ ವೇಳೆ ರಾಜ್ಯ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಇಸ್ಮಾಯಿಲ್ ನಾಟೆಕಲ್ ಅವರನ್ನು ಗೌರವಿಸಲಾಯಿತು. ಅಮಿತ್ ಶಾ ಮತ್ತು ರಾಜ್ಯದ ಬಿಜೆಪಿ ನಾಯಕ ಸಿಟಿ ರವಿ ಅವರ ಬೇಜವಾಬ್ದಾರಿ ಹೇಳಿಕೆಗಳನ್ನು ಖಂಡಿಸಲಾಯಿತು.
ಮುಂದಿನ ಕಾರ್ಯಕ್ರಮ ಹಾಗೂ ವಿವಿಧ ಬ್ಲಾಕ್ ಮಟ್ಟದ ಮಾಸಿಕ ಸಭೆಗಳನ್ನು ಮಾಡುವ ದಿನಾಂಕ ನಿಗದಿಪಡಿಸಲಾಯಿತು. ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾ ಪದಾದಿಕಾರಿಗಳಾದ ಮುರಳಿಧರ್ ಶೆಟ್ಟಿ,. ಎ ಎಂ ಕುಂಞÂಮೋನು ಮಂಜನಾಡಿ, ಸಂತೋಷ್ ದೇವಾಡಿಗ, ಟಿ ಅಬೂಬಕ್ಕರ್, ನಾರಾಯಣ್, ಸಂದೀಪ್ ರೋಡ್ರಿಗಸ್, ನಿಯಾಝ್ ಫಜೀರ್, ಮಹಮ್ಮದ್ ಸಿರಾಜ್, ಮುರಳಿಧರ್ ಶೆಟ್ಟಿ, ರಾಬರ್ಟ್ ಡಿಸೋಜಾ ಕೈರಂಗಳ, ಶೇಕಬ್ಬ ನರಿಂಗಾಣ, ಅಜರುದ್ದೀನ್, ನಸೀಮ್, ಎ ಕೆ ಬಶೀರ್ ಆತೂರು, ಕೆ ಎಂ ಇಸ್ಮಾಯಿಲ್ ನರಿಂಗಾನ, ಅಬ್ದುಲ್ ಗಫೂರ್, ಯಶೋಧರ್ ಗೌಡ, ಶಿವಪ್ರಸಾದ್, ವಸಂತ ಮೊದಲಾದವರು ಭಾಗವಹಿಸಿದ್ದರು. ಪ್ರಶಾಂತ್ ಅಮಿನ್ ಸ್ವಾಗತಿಸಿ, ಅರುಣ್ ಶೆಟ್ಟಿ ವಂದಿಸಿದರು.
0 comments:
Post a Comment