ಸಜಿಪಮೂಡ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನ ಆಚರಣೆ
ಬಂಟ್ವಾಳ, ಡಿಸೆಂಬರ್ 14, 2024 (ಕರಾವಳಿ ಟೈಮ್ಸ್) : ವಿದ್ಯಾರ್ಥಿ ದೆಸೆಯಲ್ಲಿಯೇ ಮಾರಕ ರೋಗ ಏಡ್ಸ್ ಬಗ್ಗೆ ಮಾಹಿತಿ ಪಡೆದುಕೊಂಡರೆ ಭವಿಷ್ಯತ್ತಿನಲ್ಲಿ ಬರಬಹುದಾದ ಆರೋಗ್ಯದ ಸಮಸ್ಯೆಗಳ ಅರಿವು ಮೂಡುತ್ತದೆ. ಎಂದು ಸಜಿಪಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುರೇಶ್ ಬಿ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ ಮಂಗಳೂರು, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಯವರ ಕಚೇರಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಜಿಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಕಾಳಜಿ, ಸ್ವಚ್ಛತೆ ಮತ್ತು ಜಾಗೃತಿ ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಭಯಾನಕ ರೋಗ ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಕಾರಣ ಇಂದು ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಸಾಧ್ಯವಾಗಿದೆ. ಅದೇ ರೀತಿ ಮುಂದಿನ ಆರೋಗ್ಯಯುತ ಸಮಾಜದ ಬಗ್ಗೆ ಇಂದೇ ಯೋಚಿಸಿ ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ಕುಮಾರ್ ರೈ ಮಾತನಾಡಿ, ಈ ವರ್ಷದ ಘೋಷ ವಾಕ್ಯ “ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ, ನಮ್ಮ ಆರೋಗ್ಯ ನಮ್ಮ ಹಕ್ಕು” ಎಂಬ ವಿಷಯವನ್ನು ಪ್ರಸ್ತಾಪಿಸಿ, ಪ್ರತಿಯೊಬ್ಬರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿ ಜಾಗೃತರಾದಾಗ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.
ನಿವೃತ್ತ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಜಯರಾಮ ಪೂಜಾರಿ ಏಡ್ಸ್ ಜಾಗೃತಿ ಬಗ್ಗೆ ಉಪನ್ಯಾಸಗೈದರು. ಡಾ ಶ್ರೀಶಾನಂದ ಪಿಜಿ ಇನ್ ಕಮ್ಯು ನಿಟಿ ಮೆಡಿಸಿನ್ ಮತ್ತು ಉಪನ್ಯಾಸಕ ಬಾಲಕೃಷ್ಣ ನಾಯ್ಕ್ ಕೆ ಬೆಳ್ಳಾರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಸಜಿಪಮೂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ರೋಹಿಣಿ, ಆಶಾ ಕಾರ್ಯಕರ್ತೆ ಪುಷ್ಪ, ಕಾಲೇಜು ಉಪನ್ಯಾಸಕರಾದ ಬಾಲಕೃಷ್ಣ ಎನ್ ವಿ, ಭಾರತಿ, ಗಾಯತ್ರಿ, ಶೋಭಾ, ಯಶೋಧ, ಸಿಬ್ಬಂದಿ ಲತಾ ಉಪಸ್ಥಿತರಿದ್ದರು.
ತಾಲೂಕು ಆಸ್ಪತ್ರೆಯ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕೇಂದ್ರದ ಆಪ್ತ ಸಮಾಲೋಚಕಿ ಅಕ್ಷತಾ ಸ್ವಾಗತಿಸಿ, ಐಸಿಟಿಸಿ ಆಪ್ತ ಸಮಾಲೋಚಕಿ ವಾಣಿ ಕೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment