ಮಂಗಳೂರು, ಡಿಸೆಂಬರ್ 15, 2024 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಶ್ರೀಮತಿ ಸೌಮ್ಯ ರೆಡ್ಡಿಯವರು ಅಧಿಕಾರ ವಹಿಸಿಕೊಂಡ ನಂತರ ಮೊತ್ತ ಮೊದಲ ಸಭೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, “ಮಹಿಳಾ ಸದಸತ್ವ ಅಭಿಯಾನ ಮತ್ತು ಮಹಿಳಾ ಸಮ್ಮಾನ್” ಶೀರ್ಷಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ವಾಗತಿಸಲಾಯಿತು.
ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಸೌಮ್ಯ ರೆಡ್ಡಿಯವರು, ತಾನು ಮಹಿಳಾ ಪರ ಹೋರಾಟಗಾರ್ತಿಯಾಗಿಯೇ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ಇಲ್ಲಿಯೂ ಮಹಿಳಾ ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುವೆ. ಪುರುಷ ಪ್ರಧಾನ ಸಮಾಜದಲ್ಲಿ ಸಾಕಷ್ಟು ಸ್ಪರ್ಧೆಗಳಿದ್ದರೂ ಮಹಿಳೆಯರಲ್ಲಿ ಸಾಧಿಸುವ ಛಲ ಇರಬೇಕು. ಕರ್ನಾಟಕ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವಲ್ಲಿ ಸಫಲವಾಗಿದೆ. ಅದೇ ರೀತಿ ಮಹಿಳೆಯರು ಜೀವನದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಬೆಳೆಯುವಲ್ಲಿ ಪ್ರಯತ್ನಿಸಿ ಸಫಲರಾಗಬೇಕು ಎಂದು ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರುಗಳಾದ ಬಿ ರಮಾನಾಥ ರೈ, ಅಭಯ ಚಂದ್ರ ಜೈನ್, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ, ಪ್ರಮುಖರಾದ ಜಿ ಎ ಬಾವ, ಪದ್ಮರಾಜ್ ಪೂಜಾರಿ, ಲಾವಣ್ಯ ಬಲ್ಲಾಳ್, ರಕ್ಸಿತ್ ಶಿವರಾಮ್, ಕೃಪಾ ಆಳ್ವಾ, ಸುರೇಂದ್ರ ಕಂಬಳಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಅತೀ ಹೆಚ್ಚು ಮಹಿಳಾ ಸದಸ್ಯರನ್ನು ನೋಂದಣಿ ಮಾಡಿಸಿದ ಮಂಗಳೂರು ದಕ್ಷಿಣ ಬ್ಲಾಕಿನ ಶೈಲಜಾ ನೀತಾ ಡಿ ಸೋಜಾ ಮತ್ತು ಗೀತಾ ಅತ್ತಾವರ್, ಬೆಳ್ತಂಗಡಿ ಬ್ಲಾಕಿನ ಮಧುರಾ ರಾಘವ್, ಮಂಗಳೂರು ನಗರ ಬ್ಲಾಕಿನ ಸ್ವರೂಪ ಶೆಟ್ಟಿ, ಉಳ್ಳಾಲ ಬ್ಲಾಕಿನ ಸುರೇಖಾ ಚಂದ್ರಹಾಸ್, ಆರಿಫಾ ಅವರನ್ನು ಗೌರವಿಸಲಾಯಿತು. ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment