ಬಂಟ್ವಾಳ, ಡಿಸೆಂಬರ್ 07, 2024 (ಕರಾವಳಿ ಟೈಮ್ಸ್) : ಕಡಬ ತಾಲೂಕು ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿ ಮೇಲೆ ನಡೆದ ಹಲ್ಲೆ ಘಟನೆಗೆ ಬಂಟ್ವಾಳ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಖಂಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿ ಶನಿವಾರ ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕಡಬ ತಾಲೂಕು ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿ ಸಿದ್ದಲಿಂಗ ಜಂಗಮಶೆಟ್ಟಿ ಅವರು ಶುಕ್ರವಾರ ಸರಕಾರಿ ಜಮೀನು ಅತಿಕ್ರಮಣ ಸ್ಥಳ ಭೇಟಿ ನೀಡಿದ ಸಂದರ್ಭ ಅತಿಕ್ರಮಣಕಾರರಾದ ಮುತ್ತು ಸ್ವಾಮಿ ಮತ್ತು ಇತರರು ಸೇರಿ ಹಲ್ಲೆ ನಡೆಸಿರುತ್ತಾರೆ. ಈ ಘಟನೆಯನ್ನು ಖಂಡಿಸಿ ಬಂಟ್ವಾಳ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ ಶನಿವಾರ ಖಂಡನೆ ವ್ಯಕ್ತಪಡಿಸಲಾಯಿತು.
ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಬಂಟ್ವಾಳ ತಹಶೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಸಂಘದ ಸದಸ್ಯರು ಮನವಿ ಸಲ್ಲಿಸಿದರು. ಭಾನುವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಸೋಮವಾರದಿಂದ ಲೇಖನಿ ಸ್ಥಗಿತಗೊಳಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕೆ ಪೂಜಾರಿ, ಗೌರವಾಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಕರಿಬಸಪ್ಪ ನಾಯಕ್, ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ಪ್ರತಿನಿಧಿ ಮತ್ತಿಹಳ್ಳಿಪ್ರಕಾಶ್, ಕೋಶಾಧಿಕಾರಿ ವೈಶಾಲಿ ಎ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಸೀತಾರಾಮ ಪೂಜಾರಿ, ಗೌರವ ಸಲಹೆಗಾರ ನವೀನ್ ಬೆಂಜನಪದವು, ರಾಜ್ಯ ಪರಿಷತ್ ಸದಸ್ಯ ಜೆ ಜನಾರ್ಧನ್, ಕಂದಾಯ ಇಲಾಖಾ ನೌಕರರ ಸಂಘದ ಗೌರವಾಧ್ಯಕ್ಷ ರಾಜೇಶ್ ನಾಯ್ಕ್, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಮನವಿ ಸಲ್ಲಿಸಿದ ನಿಯೋಗದಲ್ಲಿದ್ದರು.
0 comments:
Post a Comment