ಬಂಟ್ವಾಳ, ಡಿಸೆಂಬರ್ 21, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಅಳವಡಿಸಲಾಗಿರುವ ತಡೆ ಬೇಲಿಗೆ ಟಾಟಾ ಏಸ್ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮಸಾಲೆ ಪೌಡರ್ ಸಾಗಾಟದ ಟೆಂಪೋ ಚಾಲಕ ತೀವ್ರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪರಿಣಾಮ ಈ ಅವಾಂತರ ಸೃಷ್ಟಿಯಾಗಿದೆ ಎನ್ನಲಾಗಿದೆ. ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಳೆದ ಕೆಲ ಸಮಯದ ಹಿಂದೆ ಸ್ಥಳೀಯ ಪುರಸಭಾ ವತಿಯಿಂದ ಸೇತುವೆಯ ಎರಡೂ ಬದಿಗಳಲ್ಲೂ ಕಬ್ಬಿಣದ ತಡೆಬೇಲಿ ನಿರ್ಮಿಸಿ ಘನ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಆದರೂ ಕೆಲ ವಾಹನ ಚಾಲಕರು ಹುಚ್ಚು ಧೈರ್ಯದಿಂದ ತಡೆಬೇಲಿಯ ಅಡಿಯಿಂದ ಘನ ವಾಹನಗಳನ್ನು ನುಗ್ಗಿಸಲು ಪ್ರಯತ್ನಿಸುತ್ತಿದ್ದು, ಇಂತಹ ಅವಾಂತರಗಳಿಗೆ ಕಾರಣವಾಗುತ್ತಿದೆ.
ಶನಿವಾರ ಬೆಳಿಗ್ಗೆ ಕೂಡಾ ಮಸಾಲೆ ಪೌಡರ್ ಸಾಗಾಟದ ಟಾಟಾ ಏಸ್ ಗೂಡ್ಸ್ ವಾಹನದ ಚಾಲಕ ಇದೇ ತರ ಅಜಾಗರೂಕತೆಯಿಂದ ವಾಹನವನ್ನು ತಡೆಬೇಲಿ ಬೇಧಿಸಿ ನುಗ್ಗಿಸಲು ಯತ್ನಿಸಿದ್ದು, ಈ ವೇಳೆ ವಾಹನ ತಡೆಬೇಲಿಗೆ ಸಿಲುಕಿಕೊಂಡಿದ್ದಲ್ಲದೆ ವಾಹನವನ್ನೇ ತಲೆಕೆಳಗಾಗಿಸಿದೆ. ಅದೃಷ್ಟವಶಾತ್ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ.
ಇಲ್ಲಿನ ತಡೆಬೇಲಿ ಬೇಧಿಸಲು ವಾಹನ ಚಾಲಕರು ಪ್ರಯತ್ನಿಸುತ್ತಿರುವ ಪರಿಣಾಮ ಇಂತಹ ಹಲವು ಘಟನೆಗಳು ಅವಾಂತರಗಳು ಸೃಷ್ಟಿಯಾದ ಬಗ್ಗೆ ವರದಿಯಾಗುತ್ತಿದ್ದರೂ ವಾಹನ ಚಾಲಕರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಇಲ್ಲಿನ ಸೇತುವೆಯ ಇನ್ನೊಂದು ತುದಿ ಭಾಗದ ಅನತಿ ದೂರದಲ್ಲೇ ಠಾಣೆ ಹೊಂದಿರುವ ಟ್ರಾಫಿಕ್ ಪೊಲೀಸರು ವಿಫಲರಾಗುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
0 comments:
Post a Comment