ಮಂಗಳೂರು, ಡಿಸೆಂಬರ್ 29, 2024 (ಕರಾವಳಿ ಟೈಮ್ಸ್) : ಕಲ್ಕಟ್ಟ ಗ್ಯಾಸ್ ದುರಂತದಿಂದ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಕುಟುಂಬವನ್ನು ಮುಂದಿಟ್ಟುಕೊಂಡು ಸೋಶಿಯಲ್ ಮೀಡಿಯಾ ವೀರರೆನಿಸಿಕೊಳ್ಳಲು ಪ್ರಯತ್ನಿಸಿ ಕ್ಷುಲ್ಲಕ ರಾಜಕೀಯ ನಡೆಸುವ ಸ್ವ ಸಮುದಾಯದ ಮಂದಿಯ ವಿರುದ್ದ ಭಾವನಾತ್ಮಕ ಹಾಗೂ ತೀಕ್ಷ್ಣ ರೀತಿಯಲ್ಲಿ ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಪ್ರತಿಕ್ರಯಿಸಿದ್ದಾರೆ.
ಕಲ್ಕಟ್ಟ ಗ್ಯಾಸ್ ದುರಂತದ ಬಗ್ಗೆ ಪರಿಹಾರ ನೀಡುವಲ್ಲಿ ಸ್ಪೀಕರ್ ವಿಫಲರಾಗಿದ್ದಾರೆ ಎಂದು ಟೀಕಿಸಿ ಸಾಮಾಜಿಕ ತಾಣದಲ್ಲಿ ಗೀಚಿಕೊಂಡವರ ಬಗ್ಗೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ಶಾಸಕ ಯು ಟಿ ಖಾದರ್ ಫರೀದ್ ಅವರು, ಗ್ಯಾಸ್ ದುರಂತದ ಸಂತ್ರಸ್ತರ ಬಗ್ಗೆ ಎಲ್ಲ ರೀತಿಯಲ್ಲೂ ವ್ಯವಸ್ಥೆ ಮಾಡಲಾಗಿದೆ. ಆರಂಭದಲ್ಲಿ ದುರಂತ ನಡೆದಾಗ ಅವರನ್ನು ಊರವರು ಆಸ್ಪತ್ರೆಗೆ ಸಾಗಿಸಿ ರಕ್ಷಣೆಗೆ ಬೇಕಾದ ಪ್ರಾಥಮಿಕ ಕ್ರಮ ಕೈಗೊಂಡಿದ್ದಾರೆ. ಆದರೆ ಈ ಘಟನೆಗೂ, ಸಂತ್ರಸ್ತರಿಗೂ ಸಂಬಂಧವೇ ಇಲ್ಲದ ಮಂದಿಗಳು ಎಲ್ಲಿಯೋ ಕುಳಿತು ತಮಗೆ ತೋಚಿದ್ದನ್ನು ಧರ್ಮಕ್ಕೆ ಬರೆಯಲು ಆಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗೀಚಿದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಗುವುದಿಲ್ಲ. ದುಡ್ಡೇ ಎಲ್ಲದಕ್ಕೂ ಪರಿಹಾರವಾಗುವುದಿಲ್ಲ. ಮಾನವೀಯತೆ ಮುಖ್ಯ. ಸಾವಿನಲ್ಲೂ ರಾಜಕೀಯ ಮಾಡುವುದು ನಾಗರಿಕ ಸಮಾಜಕ್ಕೆ ಹೇಳಿಸಿದ್ದಲ್ಲ ಎಂದು ಖಾದರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಗ್ಯಾಸ್ ದುರಂತಕ್ಕೆ ಸಂಬಂಧಿಸಿದಂತೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಇಲ್ಲಿ ಎಲ್ಲರ ಉದ್ದೇಶವೂ ಒಂದೇ ಆಗಿತ್ತು. ನಾಲ್ಕು ಜೀವಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವುದಾಗಿತ್ತು. ಆದರೆ ವಿಘ್ನ ಸಂತೋಷದ ರೀತಿಯಲ್ಲಿ ನಡೆದುಕೊಳ್ಳುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದಿರುವ ಸ್ಪೀಕರ್ ಖಾದರ್ ವೈದ್ಯರ ಸಲಹೆಯಂತೆ ಅಗತ್ಯ ಚರ್ಮದ ವ್ಯವಸ್ಥೆಗಳನ್ನೂ ಬೇಕಾದಲ್ಲಿಂದ ತರಿಸಲಾಗಿದೆ. ಚಿಕಿತ್ಸಾ ವೆಚ್ಚಕ್ಕೂ ಸಂತ್ರಸ್ತ ಕುಟುಂಬದಿಂದ ಪಡೆಯಬಾರದು. ಎಲ್ಲದಕ್ಕೂ ನಾನು ಜವಾಬ್ದಾರಿ ಎಂದು ಕೂಡಾ ಆರಂಭದಲ್ಲೇ ಹೇಳಿದ್ದೇನೆ ಎಂದವರು ಸ್ಪಷ್ಟಪಡಿಸಿದರು.
ತುರ್ತು ಸಂದರ್ಭಗಳಲ್ಲಿ ಸರಕಾರ ನೀಡುವ ಪರಿಹಾರ ಕ್ರಮಗಳಲ್ಲೂ ನನ್ನ ಕ್ಷೇತ್ರಕ್ಕೆ ಯಾವುದೇ ರೀತಿಯ ಅನ್ಯಾಯವಾಗಲೀ, ತಾರತಮ್ಯವಾಗಲೀ ಆಗಿಲ್ಲ. ಆ ರೀತಿ ಆಗಲು ಬಿಡುವುದೂ ಇಲ್ಲ. ಈ ಬಗ್ಗೆ ಏನೇನು ಕ್ರಮ ಕೈಗೊಳ್ಳಬೇಕು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಈ ಬಗ್ಗೆ ಕ್ಷೇತ್ರದ ಜನರಿಗೂ ಸದಾ ತಿಳಿದಿದೆ. ಎಲ್ಲಿಯೋ ಕುಳಿತು ಸಾಮಾಜಿಕ ಮಾಧ್ಯಮದಲ್ಲಿ ಗೀಚಿದ್ದರಿಂದ ಅಂತಹವರಿಂದ ಏನೂ ಆಗುವುದೂ ಇಲ್ಲ. ಸಾಧ್ಯವಾದ್ರೆ ಸಂತ್ರಸ್ತ ಕುಟುಂಬದ ಜೊತೆ ಸಹಕರಿಸಿ ಅಥವಾ ಅವರಿಗಾಗಿ ದೇವನಲ್ಲಿ ಪ್ರಾರ್ಥಿಸಿ ಆ ಮೂಲಕ ತಮ್ಮ ಜವಾಬ್ದಾರಿ ನಿಭಾಯಿಸಿ ಎಂದು ಸಭಾಧ್ಯಕ್ಷರು ಕಿವಿ ಮಾತು ಹೇಳಿದ್ದಾರೆ.
0 comments:
Post a Comment