ಬಂಟ್ವಾಳ, ಡಿಸೆಂಬರ್ 15, 2024 (ಕರಾವಳಿ ಟೈಮ್ಸ್) : ಶಂಭೂರಿನಿಂದ ಜೋಗ್ ಫಾಲ್ಸ್ ಪ್ರವಾಸಕ್ಕೆಂದು ತೆರಳಿದ್ದ ಖಾಸಗಿ ಬಸ್ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಮೀರಿ ಉರುಳಿ ಬಿದ್ದ ಘಟನೆ ಜೋಗ ಸಮೀಪದ ಕಾರ್ಗಲ್ ಎಂಬಲ್ಲಿ ಭಾನುವಾರ ಸಂಭವಿಸಿದೆ.
ಅಪಘಾತದಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ಪ್ರಯಾಣಿಕರಿಗೂ ಗಾಯಗಳಾಗಿವೆ. ಅವರೆಲ್ಲರನ್ನು ಸಮೀಪದ ಸಾಗರ ಆಸ್ಪತ್ರೆಗೆ ಸಾಗಿಸಿ ಕೆಲವರನ್ನು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೂ ಸಾಗಿಸಲಾಗಿದೆ.
ಶಂಭೂರು ಶ್ರೀಸಾಯಿ ಮಂದಿರದ ವತಿಯಿಂದ ಜೋಗ್ ಜಲಪಾತಕ್ಕೆ ಈ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಪ್ರವಾಸಿಗರು ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಇನ್ನೇನು ಜೋಗ್ ತಲುಪಬೇಕೆನ್ನುವಷ್ಟರಲ್ಲಿ ಕಾರ್ಗಲ್ ಎಂಬಲ್ಲಿ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿ ಕಮರಿಗೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಶಂಭೂರು ನಿವಾಸಿಗಳಾದ ಯಶೋಧ ಹಾಗೂ ದೀಕ್ಷಿತಾ ಅವರಿಗೆ ಗಂಭೀರವಾಗಿ ಗಾಯವಾಗಿದ್ದು, ಇವರ ಜೊತೆ ಇಬ್ಬರು ಪುಟಾಣಿ ಮಕ್ಕಳಿಗೂ ತಲೆ ಹಾಗೂ ಕಣ್ಣಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಶಂಭೂರಿನ ಶ್ರೀ ಸಾಯಿ ಮಂದಿರದಿಂದ ಭಾನುವಾರ ಬೆಳಿಗ್ಗೆ 5 ಗಂಟೆಗೆ ಖಾಸಗಿ ಬಸ್ ಮೂಲಕ ಪ್ರಯಾಣ ಕೈಗೊಂಡ ಪ್ರವಾಸಿಗರು, ಶಂಭೂರು, ಪಾಣೆಮಂಗಳೂರು, ಬಿಸಿರೋಡು ಹಾಗೂ ಮಂಗಳೂರು ಕಡೆಯಿಂದ ಸುಮಾರು 45 ಮಂದಿಯನ್ನು ಹೇರಿಕೊಂಡು ಜೋಗ ಜಲಪಾತಕ್ಕೆ ತೆರಳಿತ್ತು.
ಗಾಯಾಳುಗಳ ಪೈಕಿ ಗಂಭೀರ ಗಾಯಗೊಂಡ ಕೆಲವರನ್ನು ಸುಮಾರು 10 ಅಂಬ್ಯುಲೆನ್ಸ್ ಗಳಲ್ಲಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ರಾತ್ರಿ ವೇಳೆಗೆ ಸಾಗಿಸಲಾಗಿದ್ದು, ಅಲ್ಲಿಗೆ ಧಾವಿಸಿದ ಬಂಟ್ವಾಳ ಶಾಸಕ ರಾಜೇಶನ್ ನಾಯಕ್ ಅವರು ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿ ಕುಟುಂಬಿಕರಿಗೆ ಧೈರ್ಯ ತುಂಬಿದರು.
0 comments:
Post a Comment