ಬಂಟ್ವಾಳ, ಡಿಸೆಂಬರ್ 11, 2024 (ಕರಾವಳಿ ಟೈಮ್ಸ್) : ರಾಜ್ಯದ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಕೇಂದ್ರದ ಮಂತ್ರಿಯಾಗಿ ಹಲವು ಕಾರ್ಯಕ್ರಮ ನೀಡಿದ ಎಸ್ ಎಂ ಕೃಷ್ಣ ಅವರ ಅಗಲಿಕೆ ನೋವು ತಂದಿದೆ ಎಂದು ಮಾಜಿ ಸಚಿವ, ಕೃಷ್ಣ ಅವರ ಸಂಪುಟದಲ್ಲೂ ಸಚಿವರಾಗಿದ್ದ ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಸೋತಿದ್ದ ಸಂದರ್ಭ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಪಾಂಚಜನ್ಯ ಕಾರ್ಯಕ್ರಮ ಹಮ್ಮಿಕೊಂಡು ಪಕ್ಷಕ್ಕೆ ಪುನಶ್ಚೇತನ ನೀಡಿದವರು ಎಸ್ ಎಂ ಕೃಷ್ಣ ಅವರು. ಶಿಸ್ತಿನ ರಾಜಕಾರಣ ಮಾಡಿದ ಕೃಷ್ಣ ಅವರು ಓರ್ವ ಜಂಟಲ್ ಮ್ಯಾನ್ ಪೊಲಿಟಿಶಿಯನ್ ಆಗಿದ್ದು, ಬುದ್ದಿವಂತರ ಜಿಲ್ಲೆ ಎಂಬ ಕಾರಣಕ್ಕೆ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲೆ ಮೇಲೆ ವಿಶೇಷ ಪ್ರೀತಿ-ಅಭಿಮಾನ ಹೊಂದಿದ್ದರು. ಕೃಷ್ಣ ಅವರ ಸಂಪುಟದಲ್ಲಿ ಮೀನುಗಾರಿಕೆ ಹಾಗೂ ಬಂದವರು ಸಚಿವನಾಗಿದ್ದ ನಾನು ಬಳಿಕ ಸಂಪುಟ ವಿಸ್ತರಣೆ ಸಂದರ್ಭ ನನಗೆ ಸಾರಿಗೆ ಇಲಾಖೆಯ ಹೊಣೆ ನೀಡಿದ್ದರು. ನಾನು ಮಂತ್ರಿಯಾಗಿದ್ದ ಸಂದರ್ಭ ಅಲ್ಲದೆ ರಾಜಕೀಯ ಜೀವನದಲ್ಲೂ ಅವರ ಜೊತೆ ಅತ್ಯುತ್ತಮ ಒಡನಾಟ, ಸಂಬಂಧ ಹೊಂದಿದ್ದೆ. ಅವರ ಮನೆ ಮಂದಿ ಜೊತೆಯೂ ನನಗೆ ವಿಶೇಷ ಸಂಪರ್ಕ ಇದ್ದು, ಅವರಿಗೂ ನನ್ನ ಮೇಲೆ ವಿಶೇಷ ಅಭಿಮಾನ ಇತ್ತು. ಮುತ್ಸದ್ದಿ ರಾಜಕಾರಣಿ ಕೃಷ್ಣ ಅವರು ಇಂದು ನಮ್ಮನ್ನು ಬಿಟ್ಟು ಅಗಲಿದ್ದು ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಮಾನಾಥ ರೈ ಅವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment