ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಜೊತೆಗೆ ಶಿಸ್ತು, ಸಂಸ್ಕಾರ ಕಲಿಯುವುದು ಅತೀ ಮುಖ್ಯ : ಹನೀಫ್ ಹಾಜಿ - Karavali Times ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಜೊತೆಗೆ ಶಿಸ್ತು, ಸಂಸ್ಕಾರ ಕಲಿಯುವುದು ಅತೀ ಮುಖ್ಯ : ಹನೀಫ್ ಹಾಜಿ - Karavali Times

728x90

12 December 2024

ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಜೊತೆಗೆ ಶಿಸ್ತು, ಸಂಸ್ಕಾರ ಕಲಿಯುವುದು ಅತೀ ಮುಖ್ಯ : ಹನೀಫ್ ಹಾಜಿ

ಆಂಗ್ಲ ಮಾಧ್ಯಮದ ಭರಾಟೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಸೊರಗದಿರಲಿ : ಬಾಸ್ರಿತ್ತಾಯ


ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ

    

ಬಂಟ್ವಾಳ, ಡಿಸೆಂಬರ್ 12, 2024 (ಕರಾವಳಿ ಟೈಮ್ಸ್) : ವಿದ್ಯೆ ಜೊತೆಗೆ ಶಿಸ್ತು ಸಂಸ್ಕಾರ ಕಲಿಯುವುದು ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಸಂಘಟಕ, ಉದ್ಯಮಿ, ಶಾಲಾ ಹಿರಿಯ ವಿದ್ಯಾರ್ಥಿ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಹೇಳಿದರು. 

ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು ಕರೆ ನೀಡಿದರು. 

ಸಮಾಜ ಸೇವೆ ಎಂದರೆ ಕೇವಲ ಹಣ ಖರ್ಚು ಮಾಡಿ ಕೈಗೊಳ್ಳುವ ಕಾರ್ಯಗಳು ಮಾತ್ರವಲ್ಲ. ತಮ್ಮಲ್ಲಿರುವ ಮಾನವೀಯ ಗುಣಗಳನ್ನು ಬಳಸಿಕೊಂಡು ಇತರರಿಗೆ ಮಾಡುವ ಸೇವೆಗಳು ಕೂಡಾ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಒಳಗೊಳ್ಳುತ್ತಿದ್ದು, ಇಂತಹ ಚಟುವಟಿಕೆಗಳನ್ನು ವಿದ್ಯಾರ್ಥಿ ಜೀವನದಲ್ಲೇ ಮಾಡಿಕೊಂಡು ಬರಲು ಸಾಧ್ಯವಿದೆ ಎಂದ ಹನೀಫ್ ಹಾಜಿ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಅತೀ ಪ್ರಾಮುಖ್ಯವಾಗಿದೆ ಎಂದರು. 

ನಾನು ಇದುವರೆಗೆ ಯಾವುದೇ ಪ್ರಶಸ್ತಿಗೆ ಅರ್ಜಿ ಹಾಕುವ ಉದ್ದೇಶಕ್ಕಾಗಿ ಯಾವ ಸೇವೆಯನ್ನೂ ಮಾಡಿಲ್ಲ.  ಸೇವೆಗಾಗಿ ಬಂದ ಪ್ರಶಸ್ತಿಗಳನ್ನು ಗೌರವದಿಂದ ಸ್ವೀಕರಿಸಿದ್ದೇನೆ ಅಷ್ಟೇ. ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿ ತಮ್ಮ ಅತ್ಯುತ್ತಮ ಭವಿಷ್ಯ ಕಂಡುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು. 

ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಮಾತನಾಡಿ, ಆಂಗ್ಲ ಮಾಧ್ಯಮದ ಭರಾಟೆಯಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ಸೊರಗಿ ಹೋಗದಿರಲಿ. ಶಿಕ್ಷಣ ಮಾನವೀಯತೆ ಕಳೆದುಕೊಳ್ಳದಿರಲಿ. ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ತಂದೆ-ತಾಯಿಯರನ್ನು ವೃದ್ದಾಶ್ರಮಕ್ಕೋ,  ಅನಾಥಾಶ್ರಮಕ್ಕೋ ಕಳಿಸುವಷ್ಟು ನಿಬಿಡತೆ ಮೈಗೂಡಿಸಿಕೊಳ್ಳದೆ ಪೋಷಕರನ್ನು ಚೆನ್ನಾಗಿ ನೋಡಿಕೊಂಡು ಕುಟುಂಬಕ್ಕೂ ಸಮಾಜಕ್ಕೂ ಉತ್ತಮ ಸೇವೆ ನೀಡುವ ಶಿಕ್ಷಣ ನಿಮ್ಮದಾಗಲಿ ಎಂದು ಹಾರೈಸಿದರು. 

ಶ್ರೀ ಶಾರದಾ ಹೈಸ್ಕೂಲ್ ಟ್ರಸ್ಟ್ ಅಧ್ಯಕ್ಷ ಎನ್ ನರೇಂದ್ರನಾಥ್ ಕುಡ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವೀಂದ್ರ, ಎಸ್ ಎಲ್ ಎನ್ ಪಿ ವಿದ್ಯಾಲಯದ ಸಂಚಾಲಕ ಸುಬೋಧ್ ಜಿ ಪ್ರಭು, ಶಾಲಾ ಹಿರಿಯ ವಿದ್ಯಾರ್ಥಿ, ಉದ್ಯಮಿ ಮುಹಮ್ಮದ್ ರಫೀಕ್ ಕಲ್ಲಡ್ಕ, ಶಾಲಾ ವಿದ್ಯಾರ್ಥಿ ನಾಯಕ ಮನ್ವಿತ್ ಸಿ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಭೋಜ, ನಿವೃತ್ತ ಶಿಕ್ಷಕ ರಾಧಾಕೃಷ್ಣ ಬಾಳಿಗಾ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟರಾವ್ ಕಾಮತ್ ಭಾಗವಹಿಸಿದ್ದರು. 

ಇದೇ ವೇಳೆ ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಹಳೆ ವಿದ್ಯಾರ್ಥಿಗಳಾದ ಜಯಶಂಕರ್ ಬಾಸ್ರಿತ್ತಾಯ ಹಾಗೂ ಹಾಜಿ ಜಿ ಮುಹಮ್ಮದ್ ಹನೀಫ್, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲಾ ಶಿಕ್ಷಕಿ ಸುಧಾ ನಾಗೇಶ್ ಮತ್ತು ಉದ್ಯೋಗ ನಿಮಿತ್ತ ವರ್ಗಾವಣೆಗೊಂಡ ಶಾಲಾ ಸಿಬ್ಬಂದಿ ಶ್ರೀಮತಿ ಯಶೋಮತಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. 

ಶಾಲಾ ಸಂಚಾಲಕ ಡಾ ಪಿ ವಿಶ್ವನಾಥ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕ ಶಿವಪ್ಪ ನಾಯಕ್ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಧನರಾಜ್ ದೊಡ್ಡನೇರಳೆ ವಂದಿಸಿದರು. ಶಿಕ್ಷಕರಾದ ವೀಣಾ, ಅಜಿತ್ ಕುಮಾರ್, ಸುಧಾಕರ ಹಾಗೂ ಸುಧಾ ನಾಗೇಶ್ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಮೋಕ್ಷಿತ್ ಸೂದನ್, ಫಾತಿಮತ್ ಝಾಹಿಫಾ ಹಾಗೂ ತಸ್ಮಿಯಾ ಬಾನು ಸನ್ಮಾನ ಪತ್ರ ವಾಚಿಸಿದರು. ವಿದ್ಯಾರ್ಥಿನಿ ದೀಕ್ಷಾ ಹಾಗೂ ತಂಡ ಪ್ರಾರ್ಥನೆಗೈದರು. ವಿದ್ಯಾರ್ಥಿ ಅಬ್ದುಲ್ ರಾಝಿಕ್ ಬೋಳಿಯಾರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ, ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. 

  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಜೊತೆಗೆ ಶಿಸ್ತು, ಸಂಸ್ಕಾರ ಕಲಿಯುವುದು ಅತೀ ಮುಖ್ಯ : ಹನೀಫ್ ಹಾಜಿ Rating: 5 Reviewed By: karavali Times
Scroll to Top