ಬೆಳ್ತಂಗಡಿ, ಡಿಸೆಂಬರ್ 11, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್ ಬಳಿ ಸೋಮವಾರ ಮಧ್ಯಾಹ್ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಕರಿಮಣಿ ಸರ ಸಮೇತ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಉಮೇಶ್ ಗೌಡ (40) ಎಂದು ಗುರುತಿಸಲಾಗಿದೆ. ಆರೋಪಿ ಸುಲಿಗೆ ಮಾಡಿಕೊಂಡು ಹೋದ ಕರಿಮಣಿ ಸರದ ಒಂದು ಭಾಗವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸ್ಥಳೀಯ ನಿವಾಸಿ ಮಹಿಳೆ ಶ್ರೀಮತಿ ರಾಜೀವಿ (50) ಅವರು ಸೋಮವಾರ ಮಧ್ಯಾಹ್ನ ಬೆಳ್ತಂಗಡಿಗೆ ಬಂದಿದ್ದವರು, ತನ್ನ ಮನೆಯಾದ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸಿನಲ್ಲಿ ಇಳಿದು ಕೋರಿಯಾರ್ ಮನೆಗೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಉಮೇಶ ಗೌಡ ಎಂಬಾತ ಹಿಂದಿನಿಂದ ಓಡಿ ಬಂದು ತಡೆದು ನಿಲ್ಲಿಸಿ, ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ ಚಿನ್ನದ ಕರಿ ಮಣಿ ಸರವನ್ನು ಎಳೆದಿರುತ್ತಾನೆ.
ಈ ವೇಳೆ ರಾಜೀವಿ ಅವರು ಕರಿಮಣಿ ಸರವನ್ನು ಹಿಡಿದು ಜೋರಾಗಿ ಬೊಬ್ಬೆ ಹಾಕಿದ್ದು, ಕರಿ ಮಣಿ ಸರದ ಒಂದು ಭಾಗ ಮಹಿಳೆಯ ಕೈಯಲ್ಲಿ ಮತ್ತು ಇನ್ನೊಂದು ಭಾಗ ಆರೋಪಿ ಉಮೇಶ ಗೌಡನ ಕೈಯಲ್ಲಿ ಬಾಕಿಯಾಗಿತ್ತು. ಆರೋಪಿ ಎಳೆದ ರಭಸಕ್ಕೆ ಮಹಿಳೆಯ ಕುತ್ತಿಗೆಗೆ ಮತ್ತು ಎದೆಯ ಭಾಗಕ್ಕೆ ಗಾಯ ಕೂಡಾ ಆಗಿತ್ತು. ಮಹಿಳೆಯ ಬೊಬ್ಬೆ ಕೇಳಿದ ಹತ್ತಿರದ ಮನೆಯವರು ಓಡಿ ಬರುತ್ತಿರುವುದನ್ನು ಕಂಡು ಆರೋಪಿತ ಮಹಿಳೆಯ ಕೈಯಲ್ಲಿ ಉಳಿದಿದ್ದ ಕರಿಮಣಿ ಸರದ ಭಾಗವನ್ನು ಬಿಟ್ಟು ಆತನ ಕೈಯಲ್ಲಿದ್ದ ಕರಿಮಣಿ ಸರದ ಭಾಗವನ್ನು ಹಿಡಿದುಕೊಂಡು ಓಡಿ ತಪ್ಪಿಸಿಕೊಂಡಿದ್ದ. ಆರೋಪಿ ಕೊಂಡುಹೋದ ಕರಿಮಣಿ ಸರದ ಭಾಗದಲ್ಲಿ ಸುಮಾರು 16 ಗ್ರಾಂ ಚಿನ್ನ ಇರಬಹುದು ಎಂದಾಜಿಸಲಾಗಿದ್ದು, ಅದರ ಅಂದಾಜು ಮೌಲ್ಯ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು. ತನಗಾದ ಗಾಯದ ಬಗ್ಗೆ ಮಹಿಳೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಜಿಲ್ಲಾ ಎಸ್ಪಿ ಯತೀಶ್ ಎನ್, ಅಡಿಶನಲ್ ಎಸ್ಪಿ ರಾಜೇಂದ್ರ ಡಿ ಎಸ್ ಅವರುಗಳ ನಿರ್ದೇಶನದಂತೆ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಪೆÇಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅವರ ನೇತ್ರತ್ವದಲ್ಲಿ, ಪಿಎಸೈಗಳಾದ ಮುರಳೀ ಮತ್ತು ಯಲ್ಲಪ್ಪ ಎಚ್ ಎಂ, ಎಎಸ್ಸೈ ಕೆ ಜೆ ತಿಲಕ್, ಎಸ್ ಸಿ ಗಳಾದ ಬೆನ್ನಿಚ್ಚನ್, ಜಗದೀಶ್, ಗಂಗಾಧರ ಮತ್ತು ಪಿಸಿ ಚರಣ ರಾಜ್ ಅವರುಗಳ ತಂಡ ಈ ಬಂಧನ ಕಾರ್ಯಾಚರಣೆ ನಡೆಸಿದೆ.
0 comments:
Post a Comment