ಕಲಬುರ್ಗಿ, ಡಿಸೆಂಬರ್ 04, 2024 (ಕರಾವಳಿ ಟೈಮ್ಸ್) : ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಮುಖ್ಯ ನಗರದಲ್ಲಿಯೇ ಯಾವುದೇ ಶುಚಿತ್ವ ಇಲ್ಲದೆ ಗಬ್ಬೆದ್ದು ನಾರುತ್ತಿದ್ದು, ನಾಗರಿಕರು ಸಾಂಕ್ರಾಮಿಕ ರೋಗ ಭೀತಿಯ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ನಗರದ ಮುಖ್ಯ ರಸ್ತೆಯಲ್ಲೇ ಸ್ಥಳೀಯಾಡಳಿತದಿಂದ ಯಾವುದೇ ದೈನಂದಿನ ಶುಚೀಕರಣ ಇಲ್ಲದೆ ಸ್ವಚ್ಛ ಭಾರತ ಪರಿಕಲ್ಪನೆಗೇ ಸವಾಲಾಗಿದೆ ಎನ್ನುವ ಸಾರ್ವಜನಿಕರು ನಗರವಿಡೀ ಶುಚಿತ್ವ ಇಲ್ಲದೆ ಗಬ್ಬೆದ್ದು ನಾರುತ್ತಿದ್ದು, ನಾಗರಿಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎನ್ನುತ್ತಾರೆ. ನಗರದ ಮಧ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ನಿಧಿಯಿಂದ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವೊಂದನ್ನು ಸ್ಥಾಪಿಸಲಾಗಿದ್ದು, ಅದರ ಸುತ್ತ ಕೂಡಾ ಯಾವುದೇ ಶುಚಿತ್ವ ಇಲ್ಲದೆ ಘಟಕದಿಂದ ಜನ ಕುಡಿಯುವ ನೀರು ಪಡೆಯಲೂ ಹಿಂದೇಟು ಹಾಕುತ್ತಿದ್ದಾರೆ. ಅಂದರೆ ಅಲ್ಲಿನ ನೀರನ್ನು ಪಡೆದು ಕುಡಿಯಲು ಜನ ಮನಸ್ಸು ಒಗ್ಗುತ್ತಿಲ್ಲ. ಅಷ್ಟರ ಮಟ್ಟಿಗೆ ಗಲೀಜು ಪರಿಸರ ಅಲ್ಲಿ ಕಂಡು ಬರುತ್ತಿದೆ. ಈ ಕಾರಣಕ್ಕಾಗಿ ಅಷ್ಟೊಂದು ಮೊತ್ತ ವ್ಯಯಿಸಿ ಜನರ ಉಪಯೋಗಕ್ಕಾಗಿ ಸರಕಾರ ನಿರ್ಮಿಸಿರುವ ಕುಡಿಯುವ ನೀರಿನ ಘಟಕ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎನ್ನುತ್ತಾರೆ ನಗರ ವಾಸಿಗಳು.
ಇಲ್ಲಿನ ನಗರ ಶುಚಿತ್ವದ ತಕ್ಷಣ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಆರೋಗ್ಯ ಸಚಿವರು ಎಚ್ಚೆತ್ತುಕೊಂಡು ಈ ಬಗ್ಗೆ ಗಮನ ಹರಿಸಿ ಖುದ್ದು ನಗರ ಪ್ರದಕ್ಷಿಣೆ ನಡೆಸಿ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗಂಭೀರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.
0 comments:
Post a Comment