ಕಂಚಿನಡ್ಕಪದವು ತ್ಯಾಜ್ಯ ಘಟಕದಲ್ಲಿ ಅವೈಜ್ಞಾನಿಕ ವಿಲೇವಾರಿ : ಸ್ಪೀಕರ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ - Karavali Times ಕಂಚಿನಡ್ಕಪದವು ತ್ಯಾಜ್ಯ ಘಟಕದಲ್ಲಿ ಅವೈಜ್ಞಾನಿಕ ವಿಲೇವಾರಿ : ಸ್ಪೀಕರ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ - Karavali Times

728x90

18 December 2024

ಕಂಚಿನಡ್ಕಪದವು ತ್ಯಾಜ್ಯ ಘಟಕದಲ್ಲಿ ಅವೈಜ್ಞಾನಿಕ ವಿಲೇವಾರಿ : ಸ್ಪೀಕರ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಬಂಟ್ವಾಳ, ಡಿಸೆಂಬರ್ 18, 2024 (ಕರಾವಳಿ ಟೈಮ್ಸ್) : ಸಜೀಪನಡು ಕಂಚಿನಡ್ಕ ಪ್ರದೇಶದಲ್ಲಿರುವ ಬಂಟ್ವಾಳ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳೆದ ಹಲವು ದಿನಗಳಿಂದ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಸುತ್ತಲಿನ ಪ್ರದೇಶಗಳಿಗೆ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಪರಿಸರದಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಯನ್ನು ತರಾಟೆಗೆಳೆದ ಡೀಸಿ ಮುಹಿಲನ್ ಅವರು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಿದರು.

ಸಜೀಪನಡು ಕಂಚಿನಡ್ಕ ಪ್ರದೇಶದಲ್ಲಿರುವ ಬಂಟ್ವಾಳ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳೆದ ಹಲವು ದಿನಗಳಿಂದ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಸುತ್ತಲಿನ ಪ್ರದೇಶಗಳಿಗೆ ದುರ್ವಾಸನೆ ಬರುತ್ತಿದ್ದು, ಇದರಿಂದ ಅಸಮಾಧಾನ ವ್ಯಕ್ತಪಡಿಸಿ ಪ್ರದೇಶವಾಸಿಗಳು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಎಸ್ ಅಬೂಬಕ್ಕರ್ ಸಜಿಪ ಅವರ ನೇತೃತ್ವದಲ್ಲಿ ಕ್ಷೇತ್ರದ ಶಾಸಕರೂ, ವಿಧಾನಸಭಾಧ್ಯಕ್ಷರೂ ಆಗಿರುವ ಯು ಟಿ ಖಾದರ್ ಅವರಿಗೆ ದೂರು ನೀಡಿದ್ದರು. 

ಈ ಬಗ್ಗೆ ತಕ್ಷಣ ಸ್ಪಂದಿಸಿದ ಶಾಸಕ ಖಾದರ್ ಅವರು ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಜೊತೆಗಿದ್ದರು. ಸ್ಥಳೀಯ ಗ್ರಾ ಪಂ ಸದಸ್ಯರಾದ ಲತೀಫ್ ಬೋಳಮೆ, ಅಬ್ದುಲ್ ರಹಿಮಾನ್, ರಫೀಕ್ ಗೋಳಿಪಡ್ಪು. ಇಸ್ಮಾಯಿಲ್ ಗೋಳಿಪಡ್ಪು, ಸೋಮನಾಥ್ ಭಂಡಾರಿ, ಪ್ರವೀಣ್ ಆಳ್ವ, ಹನೀಫ್ ಸಜಿಪ ಮೊದಲಾದವರು ಸ್ಥಳದಲ್ಲಿದ್ದು ಡೀಸಿ ಅವರಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು.



  • Blogger Comments
  • Facebook Comments

0 comments:

Post a Comment

Item Reviewed: ಕಂಚಿನಡ್ಕಪದವು ತ್ಯಾಜ್ಯ ಘಟಕದಲ್ಲಿ ಅವೈಜ್ಞಾನಿಕ ವಿಲೇವಾರಿ : ಸ್ಪೀಕರ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ Rating: 5 Reviewed By: karavali Times
Scroll to Top