ಬಂಟ್ವಾಳ, ಡಿಸೆಂಬರ್ 21, 2024 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಮಹಿಳೆಯರು ಸಮಾಜದಲ್ಲಿ ಘನತೆ-ಗೌರವದಿಂದ ಬದುಕುವಂತಹ ಸನ್ನಿವೇಶ ನಿರ್ಮಿಸಿದರೆ, ಇತ್ತ ಬಿಜೆಪಿಗರು ಸದನದಲ್ಲೂ ಮಹಿಳೆಯರ ಮಾನ ಹರಣ ಮಾಡುವ ನೀಚ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸಹಿಸಲು ಅಸಾಧ್ಯವಾದುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದ ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಿಡಿ ಕಾರಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಹಾಗೂ ಶಾಸಕ ಸಿ ಟಿ ರವಿ ಅವರ ವಿರುದ್ದ ಶನಿವಾರ ಬಿ ಸಿ ರೋಡು ಜಂಕ್ಷನ್ನಿನಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾತೆತ್ತಿದರೆ ಮಾತೆ ಮಾತೆ ಎನ್ನುತ್ತಲೇ ಮಹಿಳೆಯರನ್ನು ಅವಮಾನಿಸುತ್ತಿರುವ ಬಿಜೆಪಿ ನಾಯಕರ ಹಿಡನ್ ಅಜೆಂಡಾದ ಭಾಗವಾಗಿ ಎಲ್ಲವೂ ನಡೆಯುತ್ತಿದೆ. ಮಹಿಳಾ ಸಚಿವೆಯ ಬಗ್ಗೆಯೇ ಈ ರೀತಿಯ ಅವಹೇಳನಕರ ಶಬ್ದ ಬಳಸುತ್ತಿರುವ ಶಾಸಕನ ಬಗ್ಗೆ ಬಿಜೆಪಿ ನಾಯಕರು ಕಠಿಣ ಕ್ರಮ ಜರುಗಿಸುವ ಬದಲು ಅವರ ಕೃತ್ಯವನ್ನು ಬೆಂಬಲಿಸುತ್ತಿರುವುದನ್ನು ನೋಡಿದರೆ ಇದೆಲ್ಲವೂ ಅರ್ಥವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶಕ್ಕೆ ಪರಿಪೂರ್ಣ ಸಂವಿಧಾನ ಕೊಟ್ಟು ಈ ದೇಶದ ದೀನ-ದಲಿತರ, ಅಲ್ಪಸಂಖ್ಯಾತರ, ಬಡವರ ಕಣ್ಮನಿಯಾಗಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ದೇಶದ ಗೃಹ ಮಂತ್ರಿಯಾಗಿದ್ದುಕೊಂಡು ಅಮಿತ್ ಷಾ ಅವರು ಹೇಳುತ್ತಿರುವುದ ಹಿಂದೆಯೂ ಬಿಜೆಪಿಗರ ಮನಸ್ಥಿತಿ ಅರ್ಥಮಾಡಿಕೊಳ್ಳುವ ಸಂದೇಶ ಇದೆ ಆರೋಪಿಸಿದರು. ಜಾತಿ, ಧರ್ಮ, ಮಹಿಳೆ, ಸಂವಿಧಾನ ಎಲ್ಲವನ್ನೂ ಬಿಜೆಪಿಗರು ಬರೀ ರಾಜಕಾರಣಕ್ಕೆ, ಮತಗಳಿಕೆಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಅವರಲ್ಲಿ ಮಾನವೀಯತೆ ಎಂಬುದು ಕಿಂಚಿತ್ತೂ ಉಳಿದಿಲ್ಲ ಎಂದರು.
ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಬಿಜೆಪಿಗರು ಮಹಿಳೆಯರು, ಸಂವಿಧಾನ, ರಾಷ್ಟ್ರಧ್ವಜ ಇದೆಲ್ಲದರ ವಿರುದ್ದ ವಿವಾದಾತ್ಮಕವಾಗಿ ಮಾತನಾಡುತ್ತಿರುವುದು ಇದೇನು ಮೊದಲೇನಲ್ಲ. ಅವರ ಹಿಡನ್ ಅಜೆಂಡಾ ಪ್ರಕಾರ ಮನಸ್ಸಿನಲ್ಲಿರುವುದನ್ನು ಕಾಲ ಕಾಲಕ್ಕೆ ಹೇಳುತ್ತಲೇ ಬರುತ್ತಿದ್ದಾರೆ. ಬಳಿಕ ಬಾಯಿ ತಪ್ಪು ಎಂದು ತೇಪೆ ಹಚ್ಚಲು ಪ್ರಯತ್ನಿಸುತ್ತಿದ್ದಾರಷ್ಟೆ. ಇವರ ಇಂತಹ ಕೃತ್ಯಗಳನ್ನು ಎಂದಿಗೂ ಸಹಿಸಲಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಕ್ಷ ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಬಿ ವಾಸು ಪೂಜಾರಿ ಲೊರೆಟ್ಟೊ, ಬಿ ಪದ್ಮಶೇಖರ್ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಐಡಾ ಸುರೇಶ್, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ, ಜಿ ಎಂ ಇಬ್ರಾಹಿಂ ಮಂಚಿ, ಪದ್ಮನಾಭ ರೈ, ಕರೀಂ ಬೊಳ್ಳಾಯಿ, ಮುಹಮ್ಮದ್ ನಂದಾವರ, ಅಲ್ತಾಫ್ ಸಿದ್ದಕಟ್ಟೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment