ಬಂಟ್ವಾಳ, ಡಿಸೆಂಬರ್ 23, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥೆ ಹಾಗೂ ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟಿಸಲಾಗಿದೆ.
ಕಥಾ ಸ್ಪರ್ಧೆಯಲ್ಲಿ ಸುಲ್ತಾನ್ ಮನ್ಸೂರ್ ಕುಕ್ಕಾಜೆ ಮಂಚಿ ಅವರು ಪ್ರಥಮ ಸ್ಥಾನ ಪಡೆದುಕೊಂಡರೆ, ಚೇತನ್ ಮುಂಡಾಜೆ ದ್ವಿತೀಯ ಹಾಗೂ ಸುರಿಬೈಲು ಶಾಲಾ ಸಹ ಶಿಕ್ಷಕಿ ಹಸೀನಾ ಮಲ್ನಾಡ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕವನ ಸ್ಪರ್ಧೆಯಲ್ಲಿ ಸುರಿಬೈಲು ಶಾಲಾ ಸಹ ಶಿಕ್ಷಕಿ ಹಸೀನಾ ಮಲ್ನಾಡ್ ಪ್ರಥಮ ಸ್ಥಾನ ಪಡೆದುಕೊಂಡರೆ, ಸಂತೋಷ್ ಆಚಾರ್ಯ ಕುರಿಯಾಳ-ಸೊರ್ನಾಡು ದ್ವಿತೀಯ ಹಾಗೂ ನಾರ್ಶ ಮೈದಾನ ಶಾಲಾ ಸಹ ಶಿಕ್ಷಕಿ ತುಳಸಿ ಕೈರಂಗಳ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದವರು : ಹೇಮಂತ್ ಸಜಿಪಮುನ್ನೂರು, ತುಳಸಿ ಕೈರಂಗಳ, ಎಚ್ಕೆ ನಯನಾಡು, ಸಂಧ್ಯಾ ಎನ್ ಮಣಿನಾಲ್ಕೂರು, ಹಾಶ್ ಮಹಮ್ಮದ್ ಕುಳಾಲು, ರಜನಿ ಚಿಕ್ಕಯ್ಯಮಠ-ಬಿ ಸಿರೋಡು, ಪೂರ್ಣಿಮಾ ರಾಮಚಂದ್ರ ನಾಯಕ್ ಸಾಲೆತ್ತೂರು.
ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದವರು : ಎಚ್ಕೆ ನಯನಾಡು, ವಾಣಿ ವಿ ಎಸ್ ಮಯ್ಯರಬೈಲು, ಸಂಧ್ಯಾ ಎನ್ ಮಣಿನಾಲ್ಕೂರು, ವಿಜಯಲಕ್ಷ್ಮಿ ವಿ ಶೆಟ್ಟಿ ಪೆರ್ನೆ, ಕೀರ್ತಿ ಎಂ ಮೊಂತಿಮಾರು, ನಿರಂಜನ್ ಕೇಶವ ನಾಯಕ ವಿಟ್ಲ, ಅಬ್ದುಲ್ ಬಾಸಿತ್ ನಚ್ಚಬೆಟ್ಟು-ಪೆರ್ಲಾಪು.
ಕವನ ಸ್ಪರ್ಧೆಯ ತೀರ್ಪುಗಾರರಾಗಿ ವಿ ಎಸ್ ಭಟ್, ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಹಾಗೂ ವಿಂದ್ಯಾ ಎಸ್ ರೈ ಅವರು ಕಾರ್ಯನಿರ್ವಹಿಸಿದರೆ, ಕಥಾ ಸ್ಪರ್ಧೆಯ ತೀರ್ಪುಗಾರರಾಗಿ ಡಿ ಬಿ ಅಬ್ದುಲ್ ರಹಿಮಾನ್, ಶ್ರೀಕಲಾ ಕಾರಂತ್ ಹಾಗೂ ವಿಜಯಲಕ್ಷ್ಮಿ ಕಟೀಲು ಅವರು ಕಾರ್ಯನಿರ್ವಹಿಸಿದ್ದರು.
ಫಲಿತಾಂಶ ಪ್ರಕಟಿಸಿದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ, ಉಪನ್ಯಾಸಕ ಡಿ ಬಿ ರಹಿಮಾನ್ ಅವರು ಮಾತನಾಡಿ, ಸಾಹಿತ್ಯ ಎನ್ನುವುದು ಪ್ರೀತಿಯನ್ನು ಹಂಚುವ ಮತ್ತು ಕಟ್ಟುವ ಮಾರ್ಗವಾಗಿದ್ದು ಈ ಮೂಲಕ ಬಾಂಧವ್ಯವನ್ನು ಬೆಸೆಯಲು ಸಾಧ್ಯವಾಗಿದೆ. ಜಾತಿ, ಮತ, ಪಂಥಗಳನ್ನು, ಮೀರಿ ಮನಸ್ಸಿಗೆ ಆಹ್ಲಾದ ನೀಡುವ ಸಾಹಿತ್ಯಾದಿ ಚಟುವಟಿಕೆಗಳು ಯುವ ಮನಸ್ಸುಗಳನ್ನು ಸಮಾಜಮುಖಿ ಚಿಂತನೆಗಳತ್ತ ಕೊಂಡೊಯ್ಯುತ್ತಿದೆ. ಎಲ್ಲರೂ ಓದು ಮತ್ತು ಬರವಣಿಗೆಯತ್ತ ಆಸಕ್ತರಾಗಿ ಕನ್ನಡ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಬೇಕು ಎಂದರು.
ಬಹುಮಾನ ವಿಜೇತರನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಮೆಚ್ಚುಗೆ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಸಾಹಿತ್ಯ ಸಮ್ಮೇಳನದ ದಿನ ಗೌರವಿಸಲಾಗುವುದು.
ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸವಿತಾ ಶುಭ ಹಾರೈಸಿದರು. ಮಂಚಿ-ಕೊಳ್ನಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ, ವಿವಿಧ ಸಂಘ ಸಂಸ್ಥೆಗಳ ಸುಮಾರು ಐವತ್ತು ಪದಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಮರಣೆ ಸಂಚಿಕೆ ಸಮಿತಿ ಸಂಚಾಲಕ ಹಮೀದ್ ಡಿ ಅವರು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿ, ಕೋಶಾಧಿಕಾರಿ ಹಾಜಿ ಸುಲೈಮಾನ್ ಸುರಿಬೈಲು ವಂದಿಸಿದರು. ಬಂಟ್ವಾಳ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment