ಬಂಟ್ವಾಳ, ಡಿಸೆಂಬರ್ 19, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರ ಗಿಡ-ಪೊದೆಗಳಿಂದ ಆವೃತವಾಗಿದ್ದು, ಸ್ವಚ್ಛಗೊಳಿಸುವ ಜವಾಬ್ದಾರಿ ವಹಿಸದ ಇಲಾಖೆಗಳ ನಿರ್ಲಕ್ಷ್ಯದಿಂದ ಕೇಂದ್ರದೊಳಗೆ ನಾಗರ ಹಾವು ಸಹಿತ ಸರೀಸೃಪಗಳು ಹರಿದಾಡುತ್ತಿದ್ದು, ಪುಟಾಣಿಗಳ ರಕ್ಷಣೆ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಸುತ್ತ ಮಳೆಗಾಲ, ಬೇಸಿಗೆ ಕಾಲ ಎನ್ನದೆ ಸದಾ ಗಿಡ-ಪೊದೆಗಳು ಬೆಳೆದು ಅಂಗನವಾಡಿ ಪುಟಾಣಿಗಳ ಸುರಕ್ಷತೆಗೆ ಸವಾಲಾಗಿದೆ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳ ಪೋಷಕರು ಸ್ಥಳೀಯ ಪುರಸಭಾ ಸದಸ್ಯರ ಗಮನಕ್ಕೆ ಹಲವು ಬಾರಿ ನೀಡಿದರೂ ಅದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಬಗ್ಗೆಯೂ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುರಸಭಾ ಪೌರ ಕಾರ್ಮಿಕರು ಈ ಭಾಗಕ್ಕೆ ಕೆಲವು ಬಾರಿ ಸ್ವಚ್ಛಗೊಳಿಸಲು ಯಂತ್ರಗಳ ಸಹಿತ ಬಂದರೂ ಅಂಗನವಾಡಿ ಸುತ್ತ ಸ್ವಚ್ಛಗೊಳಿಸದೆ ಹಾಗೇ ಬಿಟ್ಟು ಹೋಗುತ್ತಿದ್ದು ಇದರ ಹಿಂದಿನ ರಹಸ್ಯ ಅರ್ಥವಾಗದ ನಿಗೂಢತೆಯಾಗಿದೆ ಎನ್ನುವ ಪೋಷಕರು ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಬರುವ ಪುಟಾಣಿಗಳ ಹಿತ ಕಾಯುವ ಜವಾಬ್ದಾರಿಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಹಾಗೂ ಶಿಶು ಕಲ್ಯಾಣ ಇಲಾಖೆಯ ಅಧಿಕಾರಿಗಳು ಚಕಾರವೆತ್ತದೆ ಇದ್ದು ಒಟ್ಟಾರೆ ಪುಟಾಣಿಗಳ ಹಿತ ರಕ್ಷಣೆಯ ಬಗ್ಗೆ ತೀವ್ರ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ.
ಪುರಸಭಾ ಸ್ಥಳೀಯ ಕೌನ್ಸಿಲರ್ ಆಗಲೀ, ಅಂಗನವಾಡಿ ಇಲಾಖೆಯ ಅಧಿಕಾರಿಗಳಾಗಲೀ ಇಲ್ಲಿನ ಸಮಸ್ಯೆ ಬಗ್ಗೆ ಯಾವುದೇ ಗಂಭೀರತೆ ವ್ಯಕ್ತಪಡಿಸದೆ ಇರುವುದರಿಂದ ಈ ಕೇಂದ್ರಕ್ಕೆ ಪುಟಾಣಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನಾದರೂ ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರುಗಳು ಇಲ್ಲಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ಪುಟಾಣಿ ಮಕ್ಕಳ ಜೀವ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment