ಬಂಟ್ವಾಳ, ಡಿಸೆಂಬರ್ 06, 2024 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಗುರುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಮೃತ ಮಹಿಳೆಯನ್ನು ಪಂಜಿಕಲ್ಲು ಗ್ರಾಮದ ನಿವಾಸಿ ತಿಲಕಾ (44) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಪಂಜಿಕಲ್ಲು ನಿವಾಸಿ ವೇದಾವತಿ ಅವರು ಬಂಟ್ವಾಳ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು, ಇವರು ಖಾಸಗಿ ಕಾರ್ಯಕ್ರಮ ಮುಗಿಸಿ ಪರಿಚಯದ ಶೇಖರ್ ಪೂಜಾರಿ ಎಂಬವರ ಅಟೋ ರಿಕ್ಷಾದಲ್ಲಿ ಮಧ್ವ ಕಡೆಯಿಂದ ರೆಚ್ಯಾಡಿ ಕಡೆಗೆ ಸಂಚರಿಸುತ್ತಿದ್ದ ವೇಳೆ ಬಾಂಬಿಲ ಎಂಬಲ್ಲಿ ಬೆಳ್ತಂಗಡಿ ಕಡೆಯಿಂದ ಸಂಜೀವ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಅಟೋ ರಿಕ್ಷಾ ರಸ್ತೆಗೆ ಎಸೆಯಲ್ಪಟ್ಟು ರಿಕ್ಷಾದಲ್ಲಿ ಸಹಪ್ರಯಾಣಿಕೆ ತಿಲಕಾ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment