ಬಂಟ್ವಾಳ, ಡಿಸೆಂಬರ್ 06, 2024 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಸಮೀಪದ ಬಾರಿಕೆ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಬೆಳ್ತಂಗಡಿ ತಾಲೂಕು, ಪಡಂಗಡಿ-ಕನ್ನಡಿಕಟ್ಟೆ ನಿವಾಸಿ ರಾಜೇಂದ್ರ (45) ಎಂದು ಹೆಸರಿಸಲಾಗಿದೆ. ಬೆಳಗಾವಿ ಮೂಲದ ಮೈಲಾರಪ್ಪ ಎಂಬವರು ನಿರ್ವಾಹಕರಾಗಿ ಹಾಗೂ ಹೇಮಂತ್ ಎಂಬವರು ಚಾಲಕರಾಗಿದ್ದ ಕೆಎ 19 ಎಫ್ 3115 ನೋಂದಣಿ ಸಂಖ್ಯೆಯ ಧರ್ಮಸ್ಥಳ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಬಾಂಬಿಲ ಸಮೀಪದ ಬಾರಿಕೆ ಎಂಬಲ್ಲಿ ಬೈಕಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬೈಕ್ ಸವಾರ ರಾಜೇಂದ್ರ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಸ್ ನಿರ್ವಾಹಕ ಮೈಲಾರಪ್ಪ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
0 comments:
Post a Comment