ಬಂಟ್ವಾಳ, ಡಿಸೆಂಬರ್ 06, 2024 (ಕರಾವಳಿ ಟೈಮ್ಸ್) : ಡಾಮರೀಕರಣ ಕಾಣದೆ ಹಲವು ವರ್ಷಗಳೇ ಕಳೆದರೂ ಇನ್ನೂ ನಾದುರಸ್ತಿಯಲ್ಲಿರುವ ಪಾಣೆಮಂಗಳೂರು ಪೇಟೆಯ ಒಳಭಾಗದಲ್ಲಿರುವ ಮುಖ್ಯ ರಸ್ತೆಗೆ ಪೂರ್ಣ ಡಾಮರೀಕರಣ ನಡೆಸದೆ ತೇಪೆ ಕಾಮಗಾರಿಗೆ ಬಂದ ಪಿಡಬ್ಲುಡಿ ಗುತ್ತಿಗೆದಾರರನ್ನು ವಾಪಾಸು ಕಳಿಸಿದ ನಾಗರಿಕರು ರಸ್ತೆ ದುರಸ್ತಿಯಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿರುವ ಲೋಕೋಪಯೋಗಿ ಇಲಾಖಾಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಬಿ ರಮಾನಾಥ ರೈ ಅವರು ವಿರೋಧ ಪಕ್ಷದ ಶಾಸಕರಾಗಿದ್ದ ಅವಧಿಯಲ್ಲೊಮ್ಮೆ ಪಾಣೆಮಂಗಳೂರು ಪೇಟೆಯಿಂದ ಆಲಡ್ಕ ಒಳ ರಸ್ತೆಯಾಗಿ ಮೆಲ್ಕಾರ್ ಸಂಗಮದವರೆಗೂ ಪೂರ್ಣ ಪ್ರಮಾಣದಲ್ಲಿ ಡಾಮರೀಕರಣ ನಡೆದಿದ್ದು ಬಿಟ್ಟರೆ ಇಲ್ಲಿನ ಮುಖ್ಯ ರಸ್ತೆಗೆ ಯಾವುದೇ ಡಾಮರೀಕರಣವಾಗಲೀ, ರಸ್ತೆ ದುರಸ್ತಿಯಾಗಲೀ ನಡೆದೇ ಇಲ್ಲ. ಕಳೆದ ವರ್ಷ ಪಾಣೆಮಂಗಳೂರು ಪೇಟೆಯ ರಥ ಬೀಧಿ ಪರಿಸರಕ್ಕೆ ಮಾತ್ರ ಒಂದಷ್ಟು ಡಾಮರೀಕರಣ ನಡೆಸಿ ಅಲ್ಲಿಂದಲೇ ಪರಾರಿಯಾಗಿದ್ದಾರೆ ಎನ್ನುವ ಸ್ಥಳೀಯರು ಉಳಿದ ಭಾಗಕ್ಕೆ ಡಾಮರೀಕರಣ ಹಾಗೂ ತಾರತಮ್ಯ ನೀತಿಯ ಬಗ್ಗೆ ಕೇಳಿದರೆ ಇಲಾಖೆಯಲ್ಲಿ ಹಣ ಇಲ್ಲ ಎಂದು ಅಧಿಕಾರಿಗಳು ಜಾರಿಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಪಿಡಬ್ಲ್ಯುಡಿ ಅಧಿಕಾರಿಗಳಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರತಿಸ್ಪಂದನೆ ದೊರೆಯುತ್ತಿಲ್ಲ ಎನ್ನುವ ಸ್ಥಳೀಯರು ಈ ಬಗ್ಗೆ ಲೋಕೋಪಯೋಗಿ ಇಲಾಖಾ ಕಛೇರಿಗೆ ಮನವಿ ನೀಡಲು ಮುಖತಃ ಭೇಟಿಯಾಗಲು ತೆರಳಿದರೆ ಕಚೇರಿಯಲ್ಲಿ ಫ್ಯಾನುಗಳು ಮಾತ್ರ ತಿರುಗುತ್ತಲೇ ಇರುತ್ತದೆ ವಿನಃ ಯಾವುದೇ ಚೇಂಬರಿನಲ್ಲೂ ಯಾವುದೇ ಅಧಿಕಾರಿಗಳ ಉಪಸ್ಥಿತಿ ಕಂಡು ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾಗರಿಕರು ಸಮಸ್ಯೆ ಹೇಳಿಕೊಂಡರೆ ಅಧಿಕಾರಿಗಳು ದುಡ್ಡಿಲ್ಲ ಎಂದು ನೇರವಾಗಿ ಸರಕಾರವನ್ನು ದೂರುವ ಪರಿಪಾಟವನ್ನು ರೂಢಿಸಿಕೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ನಾಗರಿಕರು.
ನಾಗರಿಕರ ಆಕ್ರೋಶ ಮೇರೆ ಮೀರಿ ಇನ್ನೇನು ಪ್ರತಿಭಟನೆ ಹಮಿಕೊಳ್ಳುವ ಸಿದ್ದತೆ ಮಾಡುತ್ತಿರುವ ಬಗ್ಗೆ ಅರಿತ ಅಧಿಕಾರಿಗಳು ರಸ್ತೆಗೆ ಒಂದಷ್ಟು ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿ ಹಾಕಿ ತೇಪೆ ಹಚ್ಚಲು ಬಂದಿದ್ದು, ಈ ಸಂದರ್ಭ ಜಮಾಯಿಸಿದ ಸ್ಥಳೀಯರು ಅರ್ಧಂಬರ್ದ ತೇಪೆ ಕಾಮಗಾರಿ ಬೇಕಾಗಿಲ್ಲ. ಆಗುವುದಾದರೆ ಪೂರ್ಣ ಡಾಮರೀಕರಣ ಮಾಡಿ ರಸ್ತೆ ದುರವಸ್ತೆಗೆ ಕಾಯಕಲ್ಪ ಒದಗಿಸಿ ಎಂದು ಕಡ್ಡಿ ಮುರಿದಂತೆ ಹೇಳಿ ಬಂದವರನ್ನು ವಾಪಾಸು ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಚೇರಿಯಲ್ಲಿ ಹಲವು ವರ್ಷಗಳ ಕಾಲ ಬೀಡು ಬಿಟ್ಟಿರುವ ಅಧಿಕಾರಿಗಳಿಂದಾಗಿಯೇ ಇಂತಹ ನಾಗರಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ವರ್ಷಾನುಗಟ್ಟಲೆ ಝಂಡಾ ಹೂಡಿ ಸರಕಾರವನ್ನೇ ಕಟಕಟೆಯಲ್ಲಿ ನಿಲ್ಲಿಸುವ ಅಧಿಕಾರಿಗಳ ವಿರುದ್ದ ಸರಕಾರ ಕಠಿಣ ಕ್ರಮ ಜರುಗಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
0 comments:
Post a Comment