ಬಂಟ್ವಾಳ, ನವೆಂಬರ್ 10, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಶೌಚಾಲಯ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಾಣೆಮಂಗಳೂರು ಆಸುಪಾಸಿನ ನಿವಾಸಿಗಳಿಗೆ ಕಳೆದೆರಡು ದಿನಗಳಿಂದ ಕುಡಿಯುವ ನೀರಿಲ್ಲದೆ ಚಡಪಡಿಸುತ್ತಿರುವ ಸನ್ನಿವೇಶ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಣೆಮಂಗಳೂರು ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಶೌಚಾಲಯ ಕಾಮಗಾರಿ ಸಂದರ್ಭ ಅಲ್ಲಿಂದ ತೆಗೆದ ಮಣ್ಣು ಅಲ್ಲೇ ಸಮೀಪದಲ್ಲಿರುವ ಕುಡಿಯುವ ನೀರಿನ ಪೈಪ್ ಲೈನ್ ಮೇಲೆ ರಾಶಿ ಹಾಕಿದ ಪರಿಣಾಮ ಪೈಪ್ ತುಂಡಾಗಿ ಕುಡಿಯುವ ನೀರು ಸರಬರಾಜಿಗೆ ತೊಡಕಾಗಿದೆ. ಈ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ಮರುದಿನ ಪುರಸಭಾ ಪ್ಲಂಬರ್ ತಾತ್ಕಾಲಿಕ ರಿಪೇರಿ ಮಾಡಿದರೂ ಮತ್ತೆ ನೀರು ಬಿಡುವ ಸಂದರ್ಭ ಅದು ತುಂಡಾಗಿ ನೀರಿನ ಸರಬರಾಜಿಗೆ ಮತ್ತೆ ತೊಡಕಾಗಿದೆ. ಪುರಸಭೆಯ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರೇ ಈ ಶೌಚಾಲಯ ಕಾಮಗಾರಿಯನ್ನು ಕೂಡಾ ನಿರ್ವಹಿಸುತ್ತಿದ್ದು, ಪರಿಸರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಇರುವ ಬಗ್ಗೆ ಅರಿವಿದ್ದೇ ಈ ಅವಾಂತರ ಸೃಷ್ಟಿಸಿ ಹಾಕಿದ್ದು, ಇದೊಂದು ಬೇಜವಾಬ್ದಾರಿ ಕೃತ್ಯ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಪುರಸಭಾಡಳಿತ ಇನ್ನೂ ಗಾಢ ನಿದ್ದೆಯಲ್ಲಿದ್ದು, ಪಾಣೆಮಂಗಳೂರು ಪರಿಸರವಾಸಿಗಳು ಎರಡು ದಿನಗಳಿಂದ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭಾಧ್ಯಕ್ಷರು ತಕ್ಷಣ ಈ ಬಗ್ಗೆ ತುರ್ತು ನಿಗಾ ವಹಿಸಿ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುವಂತೆ ಪುರವಾಸಿಗಳು ಆಗ್ರಹಿಸಿದ್ದಾರೆ.
0 comments:
Post a Comment