ಸಾರ್ವತ್ರಿಕ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಕೈ ಬೆಂಬಲಿತರು : ಉಪ ಚುನಾವಣೆಯಲ್ಲಿ ಮೂರೂ ಸ್ಥಾನ ಕಾಂಗ್ರೆಸ್ ಪಾಲು
ಬಂಟ್ವಾಳ, ನವೆಂಬರ್ 27, 2024 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮ ಪಂಚಾಯತಿನ 3 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರೂ ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ನಂದಾವರ 3ನೇ ವಾರ್ಡಿನಲ್ಲಿ ಕೈ ಬೆಂಬಲಿತ ಅಭ್ಯರ್ಥಿ ಇಸ್ಮಾಯಿಲ್ ನಂದಾವರ-ಕೋಟೆ, ಆಲಾಡಿ ವಾರ್ಡ್ ಸಂಖ್ಯೆ 5 ರಲ್ಲಿ ಕ್ರಮವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಧನಂಜಯ ಶೆಟ್ಟಿ ಹಾಗೂ ಸೆಲಿನ್ ಅವರು ವಿಜಯಿಯಾಗಿದ್ದಾರೆ.
ಸಜಿಪಮುನ್ನೂರು ಗ್ರಾಮದ ಈ ಹಿಂದಿನ ಸಾರ್ವತ್ರಿಕ ಚುನಾವಣೆಯ ಸಂದರ್ಭ ಕಾಂಗ್ರೆಸ್ ಬೆಂಬಲಿಗರು ಶೂನ್ಯ ಸಂಪಾದನೆ ಮಾಡಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡು ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದಾರೆ. ಈ ಮೂಲಕ ಸಜಿಪಮುನ್ನೂರು ಪಂಚಾಯತಿನಲ್ಲಿ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 4ಕ್ಕೇರಿದೆ. ಇಲ್ಲಿನ ಎಸ್ ಡಿ ಪಿ ಐ ಬೆಂಬಲಿತನಾಗಿ ಈ ಹಿಂದೆ ಜಯಗಳಿಸಿದ್ದ ಶಮೀರ್ ಅವರು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ವಾರ್ಡ್ ಸಂಖ್ಯೆ 3 ರ ನಂದಾವರ, ನಂದಾವರ-ಕೋಟೆ, ನಂದಾವರ-ಗುಂಪುಮನೆ, ದಾಸರಗುಡ್ಡೆ ವಾರ್ಡಿನಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇಲ್ಲಿನ ಸರಕಾರಿ ಶಾಲೆಯ 2 ಬೂತ್ ಗಳಲ್ಲಿ ಕ್ರಮವಾಗಿ 66 ಹಾಗೂ 61 ಶೇಕಡಾ ಮತದಾನವಾಗಿತ್ತು. ಒಟ್ಟು 951 ಮಂದಿ ಮತದಾನ ಮಾಡಿದ್ದು, ಈ ಪೈಕಿ ಇಸ್ಮಾಯಿಲ್ ಅವರು 566 ಮತಗಳನ್ನು ಪಡೆದರೆ, ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿ ಅಬ್ದುಲ್ ಹಕೀಂ 301 ಮತಗಳು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಇಬ್ರಾಹಿಂ ಅವರು 29 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಬಾರಕ್ 50 ಮತಗಳನ್ನು ಪಡೆದುಕೊಂಡಿದ್ದಾರೆ. 5 ಮತಗಳು ತಿರಸ್ಕøತಗೊಂಡಿದೆ. ಇಸ್ಮಾಯಿಲ್ ಅವರು 265 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ವಾರ್ಡ್ ಸಂಖ್ಯೆ 5 ರ ಮಲಾಯಿಬೆಟ್ಟು, ತನ್ನಚ್ಚಿಲ್, ವರಕಾಯಿ, ಮರ್ತಾಜೆ, ಉದ್ದೊಟ್ಟು, ವಿದ್ಯಾನಗರ, ಕರಂದಾಡಿ ಕ್ವಾಟ್ರಸ್, ಆಲಾಡಿ, ಇಂದಿರಾ ನಗರ, ಬಾಳಿಕೆ ವಾರ್ಡಿನ ಹಿಂದುಳಿದ ವರ್ಗ ಬಿ ವರ್ಗಕ್ಕೆ ಮೀಸಲಾಗಿದ್ದು, ಆಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆದಿದ್ದು, 66 ಶೇಕಡಾ ಮತದಾನವಾಗಿತ್ತು. ಒಟ್ಟು 1920 ಮಂದಿ ಮತ ಚಲಾಯಿಸಿದ್ದು, ಈ ಪೈಕಿ ಕೈ ಬೆಂಬಲಿತರಾಗಿ ಸ್ಪರ್ಧಿಸಿದ್ದ ಧನಂಜಯ ಶೆಟ್ಟಿ 594 ಹಾಗೂ ಸೆಲಿನ್ ಅವರು 604 ಮತಗಳನ್ನು ಪಡೆದುಕೊಂಡರೆ, ಎಸ್ ಡಿ ಪಿ ಐ ಬೆಂಬಲಿತರಾಗಿ ಸ್ಪರ್ಧಿಸಿದ್ದ ಫಿಲಿಪ್ ಹೆನ್ರಿ ಡಿ ಸೋಜ 340 ಹಾಗೂ ಹಾಗೂ ಸಿಂತಿಯಾ ವೆಲೆಂಟೈನ್ ಡಿ ಸೋಜ 328 ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಧನ್ಯಶ್ರೀ ಪಿ ಎನ್ 33 ಹಾಗೂ ಸಚಿನ್ ಕುಮಾರ್ 18 ಮತಗಳನ್ನಷ್ಟೆ ಪಡೆಯುವಲ್ಲಿ ಸಫಲರಾಗಿದ್ದಾರೆ. 3 ಮತಗಳು ತಿರಸ್ಕತಗೊಂಡಿತ್ತು. ಈ ಮೂಲಕ ಕಾಂಗ್ರೆಸ್ ಬೆಂಬಲಿತರಾದ ಧನಂಜಯ ಶೆಟ್ಟಿ ಹಾಗೂ ಸೆಲಿನ್ ಅವರು ಕ್ರಮವಾಗಿ 254 ಹಾಗೂ 276 ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.
ರಾಜ್ಯ ಸರಕಾರದ ಗ್ಯಾರಂಟಿ ಹಾಗೂ ರೈ ಅಭಿವೃದ್ದಿ ಕಾರ್ಯಗಳಿಗೆ ಸಂದ ಜಯ : ಯೂಸುಫ್
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆ ಸಂದರ್ಭ ಕೆಲವೊಂದು ಅಪಪ್ರಚಾರಗಳು ಹಾಗೂ ಸುಳ್ಳು ಭರವಸೆಗಳು ಮೇಳೈಸಿ ಕಾಂಗ್ರೆಸ್ ಸಾಧನೆ ಮಂಕಾಗಿ ಕಂಡ ಪರಿಣಾಮ ಜನ ಹೊಸತನಕ್ಕೆ ಮಾರು ಹೋಗಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಾರಾದರೂ ಬಳಿಕದ ರಾಜಕೀಯ ಬೆಳವಣಿಗೆಗಳಿಂದ ತೀವ್ರ ರೋಸಿ ಹೋಗಿದ್ದರು. ಚುನಾವಣೆ ಕಳೆದು ಕೆಲವೇ ದಿನಗಳಲ್ಲಿ ಇತರ ಪಕ್ಷಗಳ ಪೊಳ್ಳು ಭರವಸೆಗಳಿಗಿಂತ ಕಾಂಗ್ರೆಸ್ಸಿನ ಅಭಿವೃದ್ದಿ ರಾಜಕೀಯವೇ ಲೇಸು ಎಂಬುದನ್ನು ಮನಗಂಡಿದ್ದರು. ಅಲ್ಲದೆ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಮಾಜಿ ಸಚಿವರಾದ ಬಿ ರಮಾನಾಥ ರೈ ಅವರು ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳೇ ಮೇಲು ಎಂದು ತಾಳೆ ಹಾಕಿದ ಪರಿಣಾಮ ಇದೀಗ ಗ್ರಾಮಸ್ಥರು ಮತ್ತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿ ಪಂಚಾಯತಿನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅಭಿವೃದ್ದಿ ಪರ, ಬಡವರ ಪರ ಧ್ವನಿ ಮೊಳಗುವಂತೆ ಮಾಡಿದ್ದಾರೆ ಎಂದು ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಅಭಿಪ್ರಾಯಪಟ್ಟಿದ್ದಾರೆ.
ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆಗಳು ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಅಭೂತಪೂರ್ವ ವಿಜಯಕ್ಕೆ ಕಾರಣೀಕರ್ತರಾದ ಮಾಜಿ ಸಚಿವ ಬಿ ರಮಾನಾಥ ರೈ, ಚುನಾವಣಾ ಉಸ್ತುವಾರಿ ವಹಿಸಿದ್ದ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸಹಿತ ಪಕ್ಷದ ಹಿರಿ-ಕಿರಿಯ ನಾಯಕರು, ಕಾರ್ಯಕರ್ತರು, ಹಾಗೂ ಮತ ಚಲಾಯಿಸಿ ಬೆಂಬಲಿಸಿದ ಮತದಾರ ಬಾಂಧವರಿಗೆ ಕೃತಜ್ಞತೆಗಳು ಎಂದು ಯೂಸುಫ್ ಕರಂದಾಡಿ ತಿಳಿಸಿದ್ದಾರೆ.
0 comments:
Post a Comment