ಬಂಟ್ವಾಳ, ನವೆಂಬರ್ 11, 2024 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಗುರುವಾರ ರಾತ್ರಿ ಯುವಕನೋರ್ವನನ್ನು ಕಂಬಕ್ಕೆ ಕಟ್ಟಿ ಗುಂಪು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆರು ಮಂದಿ ಆರೋಪಿಗಳನ್ನು ಭಾನುವಾರ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿಗಳನ್ನು ಸಜಿಪನಡು ಗ್ರಾಮದ ಕಂಚಿನಡ್ಕಪದವು ನಿವಾಸಿಗಳಾದ ಮಹಮ್ಮದ್ ಸಫ್ವಾನ್ ಬಿನ್ ಎಸ್ ಬಿ ಹುಸೈನ್ (25), ಮಹಮ್ಮದ್ ರಿಜ್ವಾನ್ ಬಿನ್ ಎಸ್ ಬಿ ಹುಸೈನ್ (25), ಇರ್ಫಾನ್ ಬಿನ್ ಇಬ್ರಾಹಿಂ (27), ಅನೀಸ್ ಅಹ್ಮದ್ ಬಿನ್ ಅಶ್ರಫ್ (19), ನಾಸಿರ್ ಬಿನ್ ಇಬ್ರಾಹಿಂ (27), ಶಾಕೀರ್ ಬಿನ್ ಯಾಕೂಬ್ (18) ಎಂದು ಹೆಸರಿಸಲಾಗಿದೆ.
ನವೆಂಬರ್ 7 ರಂದು ರಾತ್ರಿ 10 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಪ (21) ಬಿನ್ ಅಬ್ದುಲ್ ರಜಾಕ್ ಎಂಬಾತ ಆತನ ದೂರದ ಸಂಬಂಧಿ ಹುಡುಗಿಯೊಬ್ಬಳು ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಮನೆಗೆ ಬರಲು ಹೇಳಿದಂತೆ ಸಜೀಪನಡು ಕಂಚಿನಡ್ಕಪದವು ಎಂಬಲ್ಲಿಗೆ ಬಂದಾಗ ಆರೋಪಿಗಳು ಮಹಮ್ಮದ್ ಮುಸ್ತಾಫ್ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಮಹಮ್ಮದ್ ಮುಸ್ತಾಫ ಎಂಬಾತನನ್ನು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿದ್ದು ಈ ಬಗ್ಗೆ ನವೆಂಬರ್ 8 ರಂದು ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2024 ಕಲಂ 115(2), 126(2), 189(2), 190, 191(2), 191(3), 351(2), 352 ಬಿ ಎನ್ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ಬಳಿಕ ಹಲ್ಲೆಗೊಳಗಾದ ಮಹಮ್ಮದ್ ಮುಸ್ತಾಫ್ ತನಗಾದ ಗಾಯದ ನೋವು ಹೆಚ್ಚಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾದ ಬಗ್ಗೆ ಆಸ್ಪತ್ರೆಯ ಸೂಚನಾ ಪತ್ರ ಬಂದಿದ್ದು ನವೆಂಬರ್ 10 ರಂದು ಹೈಲ್ಯಾಂಡ್ ಆಸ್ಪತ್ರೆಗೆ ತೆರಳಿ ಮಹಮ್ಮದ್ ಮುಸ್ತಾಫ್ ನನ್ನು ವಿಚಾರಿಸಿದಾಗ ಆತನು ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಗುಂಪು ಹಲ್ಲೆ ನಡೆಸಿ ಕೊಲೆಯತ್ನ ನಡೆಸಿರುವುದಾಗಿ ಹೇಳಿಕೆ ನೀಡಿರುವುದರಿಂದ ಪ್ರಕರಣದಲ್ಲಿ ಕಲಂ 109, 117(4) ಬಿ ಎನ್ ಎಸ್ ಕಾಯ್ದೆಯನ್ನು ಹೆಚ್ಚುವರಿಯಾಗಿ ಸೇರಿಸಿದ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಬಳಿಕ ಗುಂಪು ಹಲ್ಲೆ ಕೊಲೆಯತ್ನ ನಡೆಸಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗುಂಪು ಹಲ್ಲೆ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಹಲ್ಲೆ ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಈ ಎಲ್ಲ ಘಟನೆಗಳನ್ನು ಆಧರಿಸಿ ಇದೀಗ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment