ಮಂಗಳೂರು, ನವೆಂಬರ್ 25, 2024 (ಕರಾವಳಿ ಟೈಮ್ಸ್) : ಜಿಲ್ಲೆಯಾದ್ಯಂತ ಮಾದಕವಸ್ತು ಸೇವನೆ/ ಮಾರಾಟ ಹಾಗೂ ಅಕ್ರಮ ಮದ್ಯ ಮಾರಾಟದ ವಿರುದ್ದ ಜಿಲ್ಲಾ ಎಸ್ಪಿ ಅವರ ಸೂಚನೆ ಮೇರೆಗೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ಆಪಾದಿತರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಅರಂತೋಡು ಗ್ರಾಮದ ಅರಂತೋಡು ಪೇಟೆಯ ಅಡ್ಕಬಳೆ ರಸ್ತೆಯ ಗುಳಿಗರಾಜ ಚಿಕನ್ ಸೆಂಟರ್ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ತುಂಬಿದ ಸ್ಯಾಚೇಟ್ ಪ್ಯಾಕೇಟ್ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಶನಿವಾರ ರಾತ್ರಿ 9 ಗಂಟೆಗೆ ದಾಳಿ ಮಾಡಿದ ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಎಸ್ಸೈ ಸಂತೋಷ್ ಬಿ ಪಿ ಅವರ ನೇತೃತ್ವದ ಸಿಬ್ಬಂದಿಗಳು ಅಕ್ರಮ ಮದ್ಯದ ಬಾಟಲುಗಳನ್ನು ಶೇಖರಿಸಿಟ್ಟಿದ್ದ ಆರೋಪಿ ದಿನೇಶ್ ಕೆ (46) ಎಂಬಾತನೊಂದಿಗೆ 1760/- ಮೌಲ್ಯದ 3.960 ಲೀಟರ್ (90 ಎಂ ಎಲ್ 44 ಮದ್ಯದ ಸ್ಯಾಚೆಟ್ ಗಳು) ಮದ್ಯವನ್ನು ವಶಕ್ಕೆ ಪಡೆದುಕೊಂಡು ಆರೋಪಿ ದಿನೇಶ್ ಕೆ ಹಾಗೂ ಕಾನೂನು ಬಾಹಿರವಾಗಿ ಮದ್ಯವನ್ನು ಮಾರಾಟ ಮಾಡಿರುವ ವೈನ್ ಶಾಪ್ ಮಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ,
ಕಡಬ ಕಸಬ ಸಂತೆ ಕಟ್ಟೆ ಎಂಬಲ್ಲಿ ಶನಿವಾರ ರಾತ್ರಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆರೋಪಿತ ಸುರೇಶ (50) ಎಂಬಾತನ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ ಹಾಗೂ ಆತ ಸೇವಿಸುತ್ತಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಲ್ಲಾಜೆ ಗುಡ್ಡೆ ಎಂಬಲ್ಲಿ ಸಾರ್ವಜನಿಕ ಬಸ್ಸು ಪ್ರಯಾಣಿಕರ ತಂಗುದಾಣದ ಬಳಿ ಭಾನುವಾರ ಸಂಜೆ ಮಧ್ಯಪಾನ ಮಾಡುತ್ತಿದ್ದ ಆರೋಪಿ ಬೆಳಿಯಪ್ಪ ಗೌಡ (58) ಎಂಬಾತ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತ ಸೇವಿಸುತ್ತಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ,
ಬೆಳ್ತಂಗಡಿ ತಾಲೂಕು ಕಳಿಯಾ ಗ್ರಾಮದ ಗೇರುಕಟ್ಟೆ ಬಸ್ಸು ನಿಲ್ದಾಣದ ಒಳಗಡೆ ಇಬ್ಬರು ವ್ಯಕ್ತಿಗಳು ಮದ್ಯ ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಯಲ್ಲಪ್ಪ ಎಚ್ ಮಾದಾರ್ ದಾಳಿ ನಡೆಸಿ ಆರೋಪಿ ಸತೀಶ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೋರ್ವ ತಪ್ಪಿಸಿಕೊಂಡಿದ್ದಾನೆ. ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಸೇವಿಸುತ್ತಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment