ಉಪ್ಪಿನಂಗಡಿ, ನವೆಂಬರ್ 09, 2024 (ಕರಾವಳಿ ಟೈಮ್ಸ್) : ಬಾಯಿ ಮಾತಿನ ಮನಸ್ತಾಪ ಕಾರಣದಿಂದ ವ್ಯಕ್ತಿಯೋರ್ವನನ್ನು ಮೂರು ಮಂದಿ ಸೇರಿ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ದಾರುಣ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು, ಗೋಳಿತೊಟ್ಟು ಗ್ರಾಮದ ಅಂತಾಯ ಎಂಬಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಇಲ್ಲಿನ ನಿವಾಸಿ ರಮೇಶ್ ಪಿ ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಹರೀಶ್ ಹಾಗೂ ಆತನ ತಂಗಿಯ ಗಂಡ ಸಂತೋಷ್ ಮತ್ತು ಧರ್ಣಪ್ಪ ಯಾನೆ ಬೆಳ್ಳಿಯಪ್ಪ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮೃತರ ಪತ್ನಿ ಗೀತಾ (37) ಅವರು ಪೊಲೀಸರಿಗೆ ದೂರು ನೀಡಿದ್ದು, ರಮೇಶ್ ಕುಟುಂಬಕ್ಕೂ ಆರೋಪಿ ಹರೀಶ್ ಎಂಬಾತನ ಮನೆಯವರಿಗೂ ಸುಮಾರು 7-8 ತಿಂಗಳ ಹಿಂದೆ ರಸ್ತೆಗೆ ನೀರಿನ ಪೈಪ್ ಅಳವಡಿಸಿದ ಬಗ್ಗೆ ಬಾಯಿ ಮಾತಿನಲ್ಲಿ ಗಲಾಟೆಯಾಗಿ ಮನಸ್ತಾಪವಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಮರವೊಂದನ್ನು ಕಡಿಯುವ ವಿಚಾರದಲ್ಲಿ ಮನಸ್ತಾಪ ಮುಂದುವರಿದಿದ್ದು, ಶುಕ್ರವಾರ ಸಂಜೆ ವೇಳೆಗೆ ರಮೇಶ್ ಅವರು ಬೈಕಿನಲ್ಲಿ ಸ್ಥಳೀಯ ದೇವಸ್ಥಾನಕ್ಕೆ ಹೋಗುವರೇ ಮನೆಯಿಂದ ಸ್ವಲ್ಪ ದೂರ ಹೋಗಿದ್ದು, ಈ ವೇಳೆ ಗಂಡ ಬೊಬ್ಬೆ ಹಾಕುತ್ತಿರುವ ಶಬ್ಧ ಕೇಳಿ ಗೀತಾ ಓಡಿ ಹೋಗಿ ನೋಡಿದಾಗ ಆರೋಪಿಗಳಾದ ಹರೀಶ ಮತ್ತು ಆತನ ತಂಗಿಯ ಗಂಡ ಸಂತೋಷ್ ಹಾಗೂ ಧರ್ಣಪ್ಪ ಯಾನೆ ಬೆಳ್ಳಿಯಪ್ಪ ಎಂಬವರುಗಳು ಸೇರಿ ರಮೇಶ್ ಅವರನ್ನು ಕತ್ತಿಯಿಂದ ಕಡಿದಿರುತ್ತಾರೆ. ಪರಿಣಾಮ ರಮೇಶ್ ಅವರು ಗಂಭೀರ ಗಾಯಗೊಂಡು ಮೃತಪಟ್ಟಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment