ಬೆಂಗಳೂರು, ನವೆಂಬರ್ 14, 2024 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಕಳೆದ ಕೆಲ ವರ್ಷಗಳಿಂದ ನಿಲ್ಲಿಸಲಾಗಿದ್ದ ರಾಷ್ಟ್ರೀಯ ವಿದ್ಯಾರ್ಥಿ ವೇತನ (ಎನ್ ಎಸ್ ಪಿ) ಕ್ಕೆ ಪರ್ಯಾಯವಾಗಿ ಕಳೆದ ವರ್ಷದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಡಾಟಾ ಸಂಗ್ರಹಿಸಿ ನೇರವಾಗಿ ರಾಜ್ಯ ಸರಕಾರದ ಅಲ್ಪಸಂಖ್ಯಾತ ಇಲಾಖೆಯಿಂದಲೇ ಸ್ಕಾಲರ್ ಶಿಪ್ ನೀಡುವ ಯೋಜನೆ ಜಾರಿಗೆ ತಂದಿತ್ತು. ಆದರೆ ಈ ಬಾರಿಯ ಸಿದ್ದು ಸರಕಾರದ ಈ ವಿದ್ಯಾರ್ಥಿ ವೇತನ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಗರಂ ಆಗಿದ್ದಾರೆ.
ಕಳೆದೆರಡು ವರ್ಷಗಳಿಂದ ರಾಜ್ಯ ಅಲ್ಪಸಂಖ್ಯಾತ ಇಲಾಖೆ 1 ರಿಂದ 8ನೇ ತಗರತಿವರೆಗಿನ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ (ಪ್ರಿಮೆಟ್ರಿಕ್) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಪಿಯುಸಿ ಮೇಲ್ಪಟ್ಟ ಮೆಟ್ರಿಕ್ ನಂತರದ (ಪೋಸ್ಟ್ ಮೆಟ್ರಿಕ್) ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ (ಫೀ ರಿಯಂಬರ್ಸ್ ಮೆಂಟ್) ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆದರೆ ಈ ಮಧ್ಯೆ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ಎರಡೂ ವರ್ಷಗಳಿಂದಲೂ ಯಾವುದೇ ಅರ್ಜಿ ಆಹ್ವಾನಿಸದೆ ವಿದ್ಯಾರ್ಥಿಗಳ ಮಧ್ಯೆ ತಾರತಮ್ಯದ ನೀತಿ ಅನುಸರಿಸಿದೆ. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ಪ್ರಶ್ನಿಸಿದರೆ ತಳಮಟ್ಟದಿಂದ ಮೇಲಧಿಕಾರಿಗಳವರೆಗೆ ಯಾವುದೇ ಅಧಿಕಾರಿಗಳಲ್ಲೂ ಉತ್ತರವಿಲ್ಲ. ಅಧಿಕಾರಿಗಳು ನೇರವಾಗಿ ಸರಕಾರ ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವರಿಗೆ ಬೆರಳು ತೋರಿ ಸುಮ್ಮನಾಗುತ್ತಿದ್ದಾರೆ. ಈ ಎರಡು ತರಗತಿಗಳ ವಿದ್ಯಾರ್ಥಿಗಳಿಗೆ ಅತ್ತ ರಾಷ್ಟ್ರೀಯ ವಿದ್ಯಾರ್ಥಿವೇತನವೂ ಇಲ್ಲ, ಇತ್ತ ಸರಕಾರದ ಯೋಜನೆಯೂ ಇಲ್ಲದಂತಾಗಿದ್ದು, ಈ ಎರಡು ತರಗತಿಯ ವಿದ್ಯಾರ್ಥಿಗಳು ಅದೇನು ತಪ್ಪು ಮಾಡಿದ್ದಾರೆ? ಅಥವಾ ಈ ಎರಡು ತರಗತಿಗಳ ವಿದ್ಯಾರ್ಥಿಗಳ ಯೋಜನೆ ತಡೆಹಿಡಿಯಲು ಕಾರಣವಾದರೂ ಏನು ಎಂದು ವಿದ್ಯಾರ್ಥಿ ಪೋಷಕರು ಸಿದ್ದು ಸರಕಾರ ಹಾಗೂ ಝಮೀರ್ ಪ್ರತಿನಿಧಿಸುವ ಅಲ್ಪಸಂಖ್ಯಾತ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ.
ಇನ್ನು ಪೋಸ್ಟ್ ಮೆಟ್ರಿಕ್ ಶುಲ್ಕ ಮರುಪಾವತಿ ಯೋಜನೆಯೂ ಕಣ್ಣಿಗೆ ಮಣ್ಣೆರಚುವ ಯೋಜನೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಕಾರಣ ಪಿಯುಸಿ ವಿದ್ಯಾರ್ಥಿಗಳಿಗೆ ಕೇವಲ 4 ಸಾವಿರ ರೂಪಾಯಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಕೇವಲ 3 ಸಾವಿರ ರೂಪಾಯಿಗಳ ಜುಜುಬಿ ಮೊತ್ತವನ್ನು ಮಂಜೂರುಗೊಳಿಸಲಾಗಿದ್ದು, ಇದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎನ್ನುವ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಹಿಂದೆ ನೀಡಲಾಗುತ್ತಿದ್ದ 9 ರಿಂದ 15 ಸಾವಿರ ರೂಪಾಯಿವರೆಗಿನ ವಿದ್ಯಾರ್ಥಿ ವೇತನ ಮೊತ್ತವನ್ನು ಈ ಮಟ್ಟದಲ್ಲಿ ಕಡಿಮೆಗೊಳಿಸಿ ನೀಡಿದರೆ ಅದರಿಂದ ಪ್ರಯೋಜನವಾದರೂ ಏನು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕಳೆದ ವರ್ಷದ ವಿದ್ಯಾರ್ಥಿ ವೇತನ ಮೊತ್ತ ವಿಧಾನಸಭಾ ಚುನಾವಣೆ ಘೋಷಣೆಯಾದ ಸಂದರ್ಭ ಮಂಜೂರಾತಿ ನಿಂತ ಬಳಿಕ ಹಲವು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಇನ್ನೂ ಜಮೆಯಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಅರಿವು ಶೈಕ್ಷಣಿಕ ಸಾಲದ ಅರ್ಜಿ ಜೊತೆ ಬಲವಂತದ ಖಾಲಿ ಚೆಕ್ ವಸೂಲಿ
ಇನ್ನು ಈ ಹಿಂದೆ ಅಲ್ಪಸಂಖ್ಯಾತ ವರ್ಗದ ಪಿಯುಸಿ ಬಳಿಕದ ಎಲ್ಲ ಕೋರ್ಸುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಅರಿವು ಶೈಕ್ಷಣಿಕ ಸಾಲ ಮಂಜೂರಾತಿ ಯೋಜನೆಯನ್ನು ಇದೀಗ ಕೇವಲ ಸಿಇಟಿ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಆಹ್ವಾನಿಸಲಾಗುತ್ತಿದೆ. ಇದರಲ್ಲೂ ಕೂಡಾ ವಿದ್ಯಾರ್ಥಿಗಳು ಯೋಜನೆಯ ಸನಿಹವೇ ಸುಳಿಯದಂತಹ ಕಟು ನಿಯಮಗಳನ್ನು ರೂಪಿಸಿ ಅತ್ತ ಕೊಡದೇ ಇರಲೂ ಬಾರದು, ಇತ್ತ ಪಡೆದುಕೊಳ್ಳಲೂ ಬಾರದು ಎಂಬಂತಹ ಸ್ಥಿತಿಯಲ್ಲಿ ಈ ಯೋಜನೆಯನ್ನು ತಂದು ನಿಲ್ಲಿಸಲಾಗಿದೆ.
ಅಲ್ಲದೆ ಇದೀಗ ಅರಿವು ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಂದ ಖಾಲಿ ಚೆಕ್ ಗಳನ್ನು ಬಲವಂತವಾಗಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸರಕಾರದ ಅಧಿಕೃತ ಸುತ್ತೋಲೆ ಯಾವುದೇ ಅಧಿಕಾರಿ ಬಳಿಯೂ ಇಲ್ಲದಾಗಿದ್ದು, ವಿದ್ಯಾರ್ಥಿ ಪೋಷಕರಿಗೆ ಅದನ್ನು ಪ್ರದರ್ಶಿಸಿಯೂ ಇಲ್ಲ. ಇದೂ ಕೂಡಾ ವಿದ್ಯಾರ್ಥಿಗಳ ಪಾಲಿಗೆ ಬಹಳಷ್ಟು ಕಿರಿಕಿರಿ ತಂಡೊಡ್ಡುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು ಹಾಗೂ ಪೋಷಕರು. ವಿದ್ಯಾರ್ಥಿಗಳು ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಝೀರೋ ಬ್ಯಾಲೆನ್ಸ್ ಇರುವ ಸ್ಟೂಡೆಂಟ್ ಅಕೌಂಟನ್ನು ಹೊಂದಿರುತ್ತಾರೆ. ಈ ಖಾತೆಗಳಿಗೆ ಬ್ಯಾಂಕ್ ಅಧಿಕಾರಿಗಳು ಚೆಕ್ ಪುಸ್ತಕ ನೀಡುತ್ತಿಲ್ಲ. ಒಂದು ಚೆಕ್ ಬುಕ್ ನೀಡಬೇಕಾದರೆ ವಿದ್ಯಾರ್ಥಿ ಖಾತೆಯನ್ನು ಸಾಮಾನ್ಯ ಎಸ್ ಬಿ ಖಾತೆಯಾಗಿ ಪರಿವರ್ತಿಸಿ ಚೆಕ್ ಬುಕ್ ಪಡೆದುಕೊಂಡರೆ ಬ್ಯಾಂಕುಗಳು ಚೆಕ್ ಬುಕ್ ಪಡೆದುಕೊಂಡದ್ದಕ್ಕಾಗಿ ಶುಲ್ಕ ವಿಧಿಸುತ್ತದೆ. ಇದೂ ಕೂಡಾ ವಿದ್ಯಾರ್ಥಿಗಳ ಪಾಲಿಗೆ ಬಹಳಷ್ಟು ಭಾರವಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಅಲ್ಲದೆ ಝಮೀರ್ ಅಹ್ಮದ್ ಅವರು ಈ ಇಲಾಖೆಯ ಸಚಿವರಾದ ಬಳಿಕವಂತೂ ಇಲಾಖಾಧಿಕಾರಿಗಳು ಬಹಳಷ್ಟು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ಈ ಕಾರಣಕ್ಕಾಗಿ ಇಲಾಖಾಧಿಕಾರಿಗಳು ವಿದ್ಯಾರ್ಥಿಗಳ ಯೋಜನೆಗಾಗಿ ಇನ್ನಿಲ್ಲದ ಕಠಿಣ ನಿಯಮ ವಿಧಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನೂ ವಿದ್ಯಾರ್ಥಿಗಳು ಹಾಗೂ ಪೋಷಕರು ಹೊರಿಸುತ್ತಿದ್ದಾರೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಿತಕ್ಕಾಗಿ ಈ ಹಿಂದಿನ ಸರಕಾರಗಳು ಹಲವು ವಿದ್ಯಾರ್ಥಿ ಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಇದರ ಲಾಭವನ್ನು ಪಡೆದುಕೊಂಡೇ ಅದೆಷ್ಟೋ ಬಡ ವರ್ಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ಸಮುದಾಯಕ್ಕೂ ಸಮಾಜಕ್ಕೂ ಆಸ್ತಿಯಾಗಿದ್ದಾರೆ. ಈ ಬಾರಿ ಝಮೀರ್ ಅಹ್ಮದ್ ಅವರು ಸಚಿವರಾದ ಬಳಿಕ ಅಲ್ಪಸಂಖ್ಯಾತ ಇಲಾಖೆಯ ಶೈಕ್ಷಣಿಕ ಸಹಿತ ಇತರ ಯೋಜನೆಗಳೆಲ್ಲವೂ ನಿಧಾನಕ್ಕೆ ಮುಚ್ಚಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದ್ದು, ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳಿಗಾಗಿಯೇ ರಾಜ್ಯದ ಅಲ್ಪಸಂಖ್ಯಾತ ವರ್ಗದ ಜನ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಿದ್ದರು. ಆದರೆ ಇದೀಗ ಸರಕಾರ ಹಾಗೂ ಅಲ್ಪಸಂಖ್ಯಾತ ಇಲಾಖಾ ಸಚಿವರು ಅದ್ಯಾವ ಕಾರಣಕ್ಕಾಗಿ ಸಮುದಾಯಕ್ಕೆ ನೀಡಲಾಗುತ್ತಿರುವ ಯೋಜನೆಗಳ ಮೇಲೆ ವಕ್ರ ದೃಷ್ಟಿ ಬೀರುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂಬ ಆಕ್ರೋಶ ಅಲ್ಪಸಂಖ್ಯಾತ ಸಮುದಾಯದಿಂದ ಕೇಳಿ ಬರುತ್ತಿದೆ.
0 comments:
Post a Comment