ಸಾಮ್ರಾಜ್ಯಶಾಹಿ ಹಾಗೂ ಕಾರ್ಪೊರೇಟ್ ಪರ ಕೇಂದ್ರ ಸರಕಾರದ ವಿರುದ್ದ ಹೋರಾಟಕ್ಕೆ ದುಡಿಯುವ ವರ್ಗ ಸಜ್ಜಾಗಬೇಕು : ಕಾಮ್ರೆಡ್ ಶಂಕರ್ ಕರೆ - Karavali Times ಸಾಮ್ರಾಜ್ಯಶಾಹಿ ಹಾಗೂ ಕಾರ್ಪೊರೇಟ್ ಪರ ಕೇಂದ್ರ ಸರಕಾರದ ವಿರುದ್ದ ಹೋರಾಟಕ್ಕೆ ದುಡಿಯುವ ವರ್ಗ ಸಜ್ಜಾಗಬೇಕು : ಕಾಮ್ರೆಡ್ ಶಂಕರ್ ಕರೆ - Karavali Times

728x90

24 November 2024

ಸಾಮ್ರಾಜ್ಯಶಾಹಿ ಹಾಗೂ ಕಾರ್ಪೊರೇಟ್ ಪರ ಕೇಂದ್ರ ಸರಕಾರದ ವಿರುದ್ದ ಹೋರಾಟಕ್ಕೆ ದುಡಿಯುವ ವರ್ಗ ಸಜ್ಜಾಗಬೇಕು : ಕಾಮ್ರೆಡ್ ಶಂಕರ್ ಕರೆ

ಎಐಸಿಸಿಟಿಯು ಪ್ರಥಮ ರಾಜ್ಯ ಸಮ್ಮೇಳನದ ಪ್ರಯುಕ್ತ “ಶ್ರಮಜೀವಿಗಳು ಅಧಿಕಾರದತ್ತ” ಬೃಹತ್ ಕಾರ್ಮಿಕರ ಜಾಥಾ ಹಾಗೂ “ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ : ಮುಂದಿನ ದಾರಿ” ಬಹಿರಂಗ ಸಭೆ


ಬಂಟ್ವಾಳ, ನವೆಂಬರ್ 24, 2024 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ದುಡಿಯುವ ವರ್ಗ ಸಜ್ಜಾಗಬೇಕು, ಸಾಮ್ರಾಜ್ಯಶಾಹಿ ಹಾಗೂ ಕಾರ್ಪೊರೇಟ್ ಪರ ಕೇಂದ್ರ ಸರಕಾರವು ದುಡಿಯುವ ವರ್ಗದ ಮೇಲೆ ಎಲ್ಲಿಲ್ಲದ ದಾಳಿ ನಡೆಸುತ್ತಿದೆ. ಹಾಗಾಗಿ ಕಾರ್ಮಿಕರು ತಮ್ಮ ಜೀವನಕ್ಕಾಗಿ ಮಾತ್ರವಲ್ಲದೆ, ಈ ದೇಶವನ್ನು ಉಳಿಸಲು ತಯಾರಾಗಬೇಕು ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ರಾಷ್ಟ್ರಾಧ್ಯಕ್ಷ ಕಾಮ್ರೆಡ್ ವಿ ಶಂಕರ್ ಕರೆ ನೀಡಿದರು. 

ಬಿ ಸಿ ರೋಡಿನ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ಆರಂಭಗೊಂಡ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಇದರ ಪ್ರಥಮ ರಾಜ್ಯ ಸಮ್ಮೇಳನದ ಪ್ರಯುಕ್ತ ನಡೆದ “ಶ್ರಮಜೀವಿಗಳು ಅಧಿಕಾರದತ್ತ” ಬೃಹತ್ ಕಾರ್ಮಿಕರ ಜಾಥಾ ಹಾಗೂ “ಕರ್ನಾಟಕದಲ್ಲಿ ಕ್ರಾಂತಿಕಾರಿ ದುಡಿಯುವ ವರ್ಗದ ಹೋರಾಟ : ಮುಂದಿನ ದಾರಿ” ಬಹಿರಂಗ ಸಭೆಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು. 

ಎಐಸಿಸಿಟಿಯು ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ರಾಜೀವ್ ಡಿಮ್ರಿ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಹಿಂದುತ್ವದ ಪ್ರಯೋಗಾಲಯ ಎಂದು ಹೇಳಲಾಗುತ್ತದೆ. ಇಂದು ಸಾವಿರಾರು ಕಾರ್ಮಿಕರು ಕೆಂಬಾವುಟದಡಿಯಲ್ಲಿ ದ್ವೇಷದ ರಾಜಕೀಯಕ್ಕೆ ಸವಾಲು ಒಡ್ಡಿರುವುದು ಸಂತೋಷದ ವಿಚಾರ ಎಂದರು. 

ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಬಿಜೆಪಿ ಸರಕಾರವು ರೈತ ವಿರೋಧಿ ಕಾನೂನುಗಳನ್ನು ತಂದಾಗ, ರೈತರು, ಕಾರ್ಮಿಕರು ಒಗ್ಗೂಡಿ ಹೋರಾಟಗಳನ್ನು ರೂಪಿಸಿದರು. ಈ ಐಕ್ಯತೆಯು ಬಹುಮುಖ್ಯವಾದದ್ದು, ಈ ಐಕ್ಯತೆಯು ಕೇಂದ್ರ ಸರಕಾರಕ್ಕೆ ಎದಿರೇಟು ನೀಡಿದೆ ಎಂದರು. 

ಎಐಯುಟಿಯುಸಿ ಮುಖಂಡ ಕೆ ವಿ ಭಟ್ ಮಾತನಾಡಿ, ಎಡ ಕಾರ್ಮಿಕ ಸಂಘಟನೆಗಳ ಐಕ್ಯತೆಯನ್ನು ನಾವು ಈಗಾಗಲೇ ಕರ್ನಾಟಕದಲ್ಲಿ ಸ್ಥಾಪಿಸಿದ್ದೇವೆ. ಈ ಜಂಟಿ ವೇದಿಕೆಯ ಮೂಲಕ ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಿದ್ದೇವೆ. ನಾವು ಇನ್ನು ಮುಂದೆಯೂ ಒಗ್ಗಟ್ಟಿನಲ್ಲಿ ಬಿಜೆಪಿ-ಆರೆಸ್ಸೆಸ್ ಅಜೆಂಡಾಗಳನ್ನು ಸೋಲಿಸಬೇಕು ಎಂದು ಅಭಿಪ್ರಾಯಪಟ್ಟರು. 

ಎಐಸಿಸಿಟಿಯು ರಾಜ್ಯಾಧ್ಯಕ್ಷ ಕಾಮ್ರೆಡ್ ಕ್ಲಿಪ್ಟನ್ ಡಿ ರೊಸಾರಿಯೋ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಎಐಸಿಸಿಯು ಕರ್ನಾಟಕ ರಾಜ್ಯ ಸಮ್ಮೇಳನವು “ಶ್ರಮಜೀವಿಗಳು ಅಧಿಕಾರದತ್ತ” ಘೋಷಣೆಯೊಂದಿಗೆ ಬಿ ಸಿ ರೋಡಿನ ಕೈಕಂಬದಿಂದ ಬೃಹತ್ ಕಾರ್ಮಿಕರ ಜಾಥಾದೊಂದಿಗೆ ಆರಂಭಗೊಂಡಿತು. ಜಾಥಾದಲ್ಲಿ ಪೌರ ಕಾರ್ಮಿಕರು, ಅಕ್ಷರ ದಾಸೋಹ ಕಾರ್ಮಿಕರು, ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಸ್ಪತ್ರೆ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕರು, ಸರ್ಕಾರೀ ಸಂಸ್ಥೆಗಳಲ್ಲಿ ಸ್ವಚ್ಛತಾ ಕೆಲಸದಲ್ಲಿ ತೊಡಗಿರುವ ನೆಪಮಾತ್ರ ಗುತ್ತಿಗೆ ಪದ್ಧತಿ ಅಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು, ಇತರರು ಭಾಗವಹಿಸಿದ್ದು, ಕರ್ನಾಟಕದಲ್ಲಿ ಬಲವಾದ ಕಾರ್ಮಿಕ ಚಳುವಳಿಯನ್ನು ನಿರ್ಮಿಸುವ ನಿರ್ಣಯ ಕೈಗೊಂಡರು. 

ದಲಿತ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಹಿರಿಯ ಕಾರ್ಮಿಕ ಮುಖಂಡ ಬಿ ವಿಷ್ಣು ಮೂರ್ತಿ, ಎಐಸಿಸಿಟಿಯು ಜಿಲ್ಲಾಧ್ಯಕ್ಷ ಕಾಮ್ರೇಡ್ ರಾಮಣ್ಣ ವಿಟ್ಲ, ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಪಿ ಪಿ ಅಪ್ಪಣ್ಣ ಮಾತನಾಡಿದರು. ಸಮ್ಮೇಳನವನ್ನು ಧ್ವಜಾರೋಹಣ ಮತ್ತು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಚಾಲನೆ ನೀಡಲಾಯಿತು. ಬಳಿಕ ಪ್ರತಿನಿಧಿ ಸಮ್ಮೇಳನ ನಡೆದಿದ್ದು, ಸೋಮವಾರವೂ ಮುಂದುವರೆಯಲಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಾಮ್ರಾಜ್ಯಶಾಹಿ ಹಾಗೂ ಕಾರ್ಪೊರೇಟ್ ಪರ ಕೇಂದ್ರ ಸರಕಾರದ ವಿರುದ್ದ ಹೋರಾಟಕ್ಕೆ ದುಡಿಯುವ ವರ್ಗ ಸಜ್ಜಾಗಬೇಕು : ಕಾಮ್ರೆಡ್ ಶಂಕರ್ ಕರೆ Rating: 5 Reviewed By: karavali Times
Scroll to Top