ಬೆಂಗಳೂರು, ನವೆಂಬರ್ 23, 2024 (ಕರಾವಳಿ ಟೈಮ್ಸ್) : ತೀವ್ರ ಕುತೂಹಲ ಕೆರಳಿಸಿದ್ದ, ಆಡಳಿತರೂಢ ಕಾಂಗ್ರೆಸ್ ಹಾಗೂ ವಿರೋಧಿ ಮೈತ್ರಿ ಪಕ್ಷಗಳಿಗೆ ರಾಜಕೀಯ ಪ್ರತಿಷ್ಠೆಯಾಗಿದ್ದ ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ವಿರೋಧ ಪಕ್ಷಗಳ ಎಲ್ಲ ಅಪಪ್ರಚಾರಗಳನ್ನು ಮೀರಿ, ಎಲ್ಲ ಚುನಾವಣೋತ್ತರ ಸಮೀಕ್ಷೆಗಳನ್ನು ಹುಸಿಯಾಗಿಸಿ ಭರ್ಜರಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದು, ಸಂಡೂರನ್ನು ಉಳಿಸುವ ಜೊತೆಗೆ ಚನ್ನಪಟ್ಟಣ ಹಾಗೂ ಶಿಗ್ಗಾವಿಯನ್ನೂ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸ್ವಪ್ರತಿಷ್ಠೆಯ ಸಮರವಾಗಿದ್ದ ಈ ಉಪಚುನಾವಣೆಯಲ್ಲಿ ಸಿಎಂ-ಡಿಸಿಎಂ ಜೋಡಿ ಭರ್ಜರಿ ಮೇಲುಗೈ ಸಾಧಿಸಿದ್ದು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ತಮ್ಮ ಪುತ್ರರ ರಾಜಕೀಯ ಭವಿಷ್ಯಕ್ಕೆ ಹಿನ್ನಡೆ ಅನುಭವಿಸುವುದರ ಜೊತೆಗೆ ತಾವೂ ಕೂಡಾ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕಾಂಗ್ರೆಸ್ ಸಂತಸ ವ್ಯಕ್ತಪಡಿಸಿದೆ. ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿ ಗಣಿಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಸದ ಇ ತುಕಾರಾಂ ಅವರ ಪತ್ನಿ ಅನ್ನಪೂರ್ಣ ತುಕಾರಾಮ ಅವರು ಜಯಭೇರಿ ಭಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ ಸೋಲಾಗಿದೆ. ಅನ್ನಪೂರ್ಣ ಅವರು 9,105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರ ಪುತ್ರ ಭರತ್ ಬೊಮ್ಮಾಯಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವು ಸಾಧಿಸಿದ್ದಾರೆ.
ಯಾಸೀರ್ ಪಠಾಣ್ 13,448 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಅವರಿಗೆ 1,00,587 ಮತಗಳು ದೊರೆತಿದ್ದರೆ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ 86,960 ಮತಗಳು ದೊರೆತಿವೆ.
ಇನ್ನೊಂದು ಪ್ರತಿಷ್ಠಿತ ಕಣವಾಗಿದ್ದ ಚೆನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದಿಂದ ಮುನಿಸಿಕೊಂಡು ಸಿದ್ದು-ಡಿಕೆಶಿ ಆಪರೇಶನ್ ತಂತ್ರದಿಂದ ಕಾಂಗ್ರೆಸ್ ಸೇರ್ಪಡೆಗೊಂಡು ಕೈ ಟಿಕೆಟಿನಿಂದ ಸ್ಪರ್ಧಿಸಿದ್ದ ಸಿ ಪಿ ಯೋಗೀಶ್ವರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಠಕ್ಕರ್ ನೀಡಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಹ್ಯಾಟ್ರಿಕ್ ಸೋಲಿನ ರುಚಿ ತೋರಿಸಿ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಸಫಲರಾಗಿದ್ದಾರೆ. ಯೋಗೀಶ್ವರ್ ಅವರು ಸುಮಾರು 20 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ.
2019 ರಲ್ಲಿ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ, 2023 ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ನಿಖಿಲ್ ಈ ಬಾರಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಈ ಬಾರಿಯೂ ವಿಫಲರಾಗಿ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಭಾರಿಸಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಸಿದ್ದರಾಮಯ್ಯ ಸರಕಾರದ ಭಾಗ್ಯಗಳ ಯೋಜನೆಗಳಿಗೆ ಮತದಾರರು ಅನ್ನದ ಋಣ ತೋರಿದ್ದಾರೆ ಎಂಬ ಅಭಿಪ್ರಾಯ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.
0 comments:
Post a Comment