ಬಂಟ್ವಾಳ, ಅಕ್ಟೋಬರ್ 04, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರು ಉಸ್ತುವಾರಿ ಮಂತ್ರಿಯಾಗಿದ್ದ ವೇಳೆ ಸುಮಾರು 10 ಕೋಟಿಗೂ ಅಧಿಕ ಮೊತ್ತದ ಅನುದಾನದಲ್ಲಿ ಬಿ ಸಿ ರೋಡಿನಲ್ಲಿ ಶಿಲಾನ್ಯಾಸಗೊಂಡು ಅತ್ಯಂತ ವೇಗದಲ್ಲಿ ನಿರ್ಮಾಗೊಂಡು ತಾಲೂಕಿನ ಜನತೆಗೆ ಅರ್ಪಣೆಯಾಗಿರುವ ತಾಲೂಕು ಆಡಳಿತ ಸೌಧವಾಗಿರುವ ಮಿನಿ ವಿಧಾನಸೌಧದಲ್ಲಿ ಉದ್ಘಾಟನೆಯಾಗಿ ಕೇವಲ ಆರೇಳು ವರ್ಷಗಳು ಮಾತ್ರವಾಗಿದ್ದು, ಇದೀಗ ಇಲ್ಲಿ ಯಾವುದೂ ಸರಿ ಇಲ್ಲ ಎಂಬಂತಾಗಿದೆ.
ತಾಲೂಕು ಆಡಳಿತ ಸೌಧವಾಗಿರುವ ಇಲ್ಲಿ ತಾಲೂಕಿನ ಬಹುತೇಕ ಇಲಾಖಾ ಕೇಂದ್ರ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಾದ್ಯಂತ ಇರುವ ಗ್ರಾಮೀಣ ಹಾಗೂ ನಗರ ಭಾಗದ ಜನ ನಿತ್ಯವೂ ಇಲ್ಲಿಗೆ ವಿವಿಧ ಸೇವಾ ಕಾರ್ಯಗಳಿಗೆ ಆಗಮಿಸಿ ಕೆಲವೊಮ್ಮೆ ಬೆಳಿಗ್ಗಿನಿಂದ ಸಂಜೆವರೆಗೂ ಕೆಲಸ-ಕಾರ್ಯಗಳಿಗಾಗಿ ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಿರುತ್ತಾ ಇಲ್ಲಿನ ಮಿನಿ ವಿಧಾನಸೌಧದ ಯಾವುದೇ ಮಹಡಿಯಲ್ಲೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯೇ ಸಮಪರ್ಕವಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು, ಅಶಕ್ತರು ಹಾಗೂ ಅನಾರೋಗ್ಯ ಪೀಡಿತರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಜನರಿಗೆ ಮತ್ತೊಂದು ಅತೀ ಅಗತ್ಯವಾದ ಮೂಲಭೂತ ಸೌಲಭ್ಯವಾಗಿರುವ ಶೌಚಾಲಯದ ವ್ಯವಸ್ಥೆಯೂ ಸಮಪರ್ಕವಾಗಿಲ್ಲ. ನಿರ್ವಹಣೆ ಇಲ್ಲದೆ ಶೌಚಾಲಯಗಳು ಗಬ್ಬೆದ್ದು ನಾರುತ್ತಿದೆ. ಶೌಚಾಲಯದ ದುರ್ನಾತ ಕೆಲವೊಮ್ಮೆ ಆಡಳಿತ ಸೌಧದ ಎಲ್ಲ ಕಛೇರಿಗಳವರೆಗೂ ಬೀಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಇದ್ದ ಶೌಚಾಲಯಗಳಿಗೆ ಬೀಗ ಜಡಿದು ಹಾಕಲಾಗಿದ್ದು, ಅಧಿಕಾರಿ-ಸಿಬ್ಬಂದಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದರೆ, ನಿರ್ವಹಣೆ ಸಾಧ್ಯವಿಲ್ಲದ ಕಾರಣಕ್ಕೆ ಬೀಗ ಜಡಿಯಲಾಗಿದೆ ಎನ್ನುತ್ತಾರೆ. ಎಲ್ಲಿಯವರೆಗೆ ಇಲ್ಲಿನ ಅವ್ಯವಸ್ಥೆ ಇದೆಯೆಂದರೆ ತಿಂದದ್ದು ವಾಪಸ್ ಬಾಯಿ ಬರುವಂತಹ ಸನ್ನಿವೇಶ ಇದೆ ಎನ್ನುತ್ತಾರೆ ಇಲ್ಲಿಗೆ ಬರುವ ಸಾರ್ವಜನಿಕರು.
ಈ ಬಗ್ಗೆ ಸಾರ್ವಜನಿಕರು ತಾಲೂಕು ತಹಶೀಲ್ದಾರ್ ಅವರ ಗಮನಕ್ಕೆ ತಂದೆ ಇದುವರೆಗೂ ಈ ಬಗ್ಗೆ ಯಾರೂ ಲಿಖಿತ ಮನವಿ ನೀಡಿಲ್ಲ. ಯಾರಾದರೂ ಲಿಖಿತ ಮನವಿ ನೀಡಿದರೆ ಸರಕಾರಕ್ಕೆ ಅನುದಾನಕ್ಕಾಗಿ ಬರೆಯಲಾಗುವುದು. ಕುಡಿಯುವ ನೀರು ಹತ್ತಿರದಲ್ಲೇ ಇಂದಿರಾ ಕ್ಯಾಂಟೀನ್ ಇರುವುದರಿಂದ ಸಾರ್ವಜನಿಕರು ದಾಹ ನೀಗಿಸಲು ಇಂದಿರಾ ಕ್ಯಾಂಟೀನ್ ಬಳಸಿಕೊಳ್ಳಬಹುದು ಎಂಬ ಉಡಾಫೆ ಉತ್ತರವೂ ತಹಶೀಲ್ದಾರ್ ಅವರಿಂದ ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬಂಟ್ವಾಳ ಆಡಳಿತ ಸೌಧದಲ್ಲಿ ಇರುವ ಈ ಎಲ್ಲ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಗಮನಿಸಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಒದಗಿಸುವಂತೆ ಜನ ಆಗ್ರಹಿಸುತ್ತಿದ್ದಾರೆ.
0 comments:
Post a Comment