ಬಂಟ್ವಾಳ, ಅಕ್ಟೋಬರ್ 18, 2024 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಪಡು ಗ್ರಾಮದ ಕೋಟೆಕಣಿ ಸಮೀಪದ ತಲೆಮೊಗರು ಎಂಬಲ್ಲಿ ಜನವಸತಿ ಪ್ರದೇಶದಲ್ಲಿರುವ ಕೋಳಿ ಫಾರಂ ತ್ಯಾಜ್ಯಗಳಿಂದ ಪರಿಸರದ ಮನೆಗಳಲ್ಲಿ ದುರ್ವಾಸನೆ ಹಾಗೂ ನೊಣಗಳ ಹಾವಳಿ ತಲೆದೋರಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಕಾರ್ಯಾಚರಿಸುತ್ತಿರುವ ಕೋಳಿ ಫಾರಂ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಲಿಖಿತವಾಗಿ ಆಗ್ರಹಿಸಿದ್ದಾರೆ.
ಇಲ್ಲಿನ ಕೋಳಿ ಫಾರಂನಿಂದ ಹೊರಬರುವ ತ್ಯಾಜ್ಯ ಮಿಶ್ರಿತ ನೀರು ಪರಿಸರವಿಡೀ ಹರಿದು ಬರುತ್ತಿದ್ದು, ಗ್ರಾಮದೆಲ್ಲೆಡೆ ದುರ್ನಾತ ಬೀರುತ್ತಿದೆ. ಅಲ್ಲದೆ ಇಲ್ಲಿ ಉತ್ಪತ್ತಿಯಾಗುವ ನೊಣ, ಕ್ರಿಮಿ ಕೀಟಗಳು ಪರಿಸರದ ಮನೆಗಳಲ್ಲಿ ಹಿಂಡು-ಹಿಂಡಾಗಿ ಬರುತ್ತಿದ್ದು, ಇಡೀ ಮನೆಗಳು ನೊಣಗಳಿಂದ ತುಂಬಿ ಯಾವುದೇ ಆಹಾರ-ಪದಾರ್ಥಗಳನ್ನು ತಯಾರಿಸುವುದಾಗಲೀ, ತಿನ್ನುವುದಾಗಲೀ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇಲ್ಲಿನ ಕೋಳಿ ಫಾರಂನಿಂದ ಪರಿಸರದ ಸುಮಾರು 50ಕ್ಕೂ ಅಧಿಕ ಮನೆಗಳು ಬಾಧಿತವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ ಎನ್ನುವ ಗ್ರಾಮಸ್ಥರು ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರ ಪರವಾಗಿ ಸ್ಥಳೀಯರಾದ ಇಸಾಕ್, ಬಶೀರ್, ಹಕೀಂ ಹಾಗೂ ರಿಯಾಝ್ ಕೋಟೆಕಣಿ ಅವರು ಸಜಿಪಪಡು ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿ, ಪಿಡಿಒ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ಶುಕ್ರವಾರ ಲಿಖಿತ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೋಳಿ ಫಾರಂಗೆ ಬರುವ ಕೋಳಿ ಹಾಗೂ ಅದರ ಆಹಾರ ಪದಾರ್ಥ ಹೊತ್ತು ತರುವ ಬೃಹತ್ ಗಾತ್ರದ ವಾಹನಗಳು ಇಲ್ಲಿನ ಕಿರಿದಾದ ರಸ್ತೆಗಳಲ್ಲಿ ಬರುತ್ತಿದ್ದು, ಒಂದಷ್ಟು ಯಾಮಾರಿದರೂ ಸ್ಥಳೀಯ ಮನೆಗಳ ಮೇಲೆ ಮಗುಚಿ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸಜಿಪಪಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಹೊರ ಭಾಗದಿಂದ ವಾಹನಗಳಲ್ಲಿ ತಂದು ಕೋಳಿ ತ್ಯಾಜ್ಯ ಎಸೆದು ಹೋದ ಬಗ್ಗೆ ನಾಗರಿಕರು ಪ್ರತಿಭಟನೆ ಹಮ್ಮಿಕೊಂಡ ಹಿನ್ನಲೆಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ಪಂಚಾಯತ್ ವತಿಯಿಂದ ದಂಡ ವಿಧಿಸಿ ಸೂಕ್ತ ಎಚ್ಚರಿಕೆ ನೀಡಲಾಗಿತ್ತು ಎಂಬುದನ್ನು ಈ ಸಂದರ್ಭ ಸ್ಮರಿಸಬಹುದು.
0 comments:
Post a Comment