ಬಂಟ್ವಾಳ, ಅಕ್ಟೋಬರ್ 07, 2024 (ಕರಾವಳಿ ಟೈಮ್ಸ್) : ಮಧ್ಯಪ್ರದೇಶದ ಥಾಂಗ್-ತಾ ಅಸೋಸಿಯೆಷನ್ ವತಿಯಿಂದ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ತಾಂಗ್-ತಾ (ಮಣಿಪುರ ಕಳರಿ ಫೈಟ್) ಚಾಂಪಿಯನ್ ಶಿಪ್ ನಲ್ಲಿ ಸುಂಕದಕಟ್ಟೆ ನಿರಂಜನಾನಂದ ಸ್ವಾಮಿ ಪಾಲಿಟೆಕ್ನಿಕ್ ಇಲ್ಲಿನ ಮೆಕ್ಯಾನಿಕಲ್ ವಿಭಾಗದ ಪ್ರಥಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿ ಸತೀಶ್ ಎಸ್ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅಕ್ಟೋಬರ್ 5 ರಿಂದ 7 ರವರೆಗೆ ತಾಂಗ್-ತಾ ಫೆಡರೇಷನ್ ಆಫ್ ಇಂಡಿಯ ಇದರ ಸಹಕಾರದೊಂದಿಗೆ ನಡೆದ ಈ ಕ್ರೀಡಾಕೂಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿ ಈ ಸಾಧನೆ ಮಾಡಿದ್ದಾರೆ. ಇವರು ಕಳೆದ ಸೆಪ್ಟೆಂಬರ್ 21 ಹಾಗೂ 22 ರಂದು ವಿಜಯಪುರದಲ್ಲಿ ನಡೆದ 5ನೇ ರಾಜ್ಯ ಮಟ್ಟದ ಥಾಂಗ್ ತಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ಇವರು ಪೊಳಲಿ ಶ್ರೀರಾಮಕೃಷ್ಣ ತಪೊವನದಲ್ಲಿ ಪೊಳಲಿ ಸರಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯಂತ್ ಆಚಾರ್ಯ ಹಾಗೂ ಮಾರ್ಷಲ್ ಆರ್ಟ್ ತರಬೇತುದಾರ ರಾಜೇಶ್ ಬ್ರಹ್ಮಕೂಟ್ಲು ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಸತೀಶ್ ಅವರ ಸಾಧನೆಗೆ ಪೊಳಲಿ ಶ್ರೀ ರಾಮಕೃಷ್ಣ ತಪೊವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ.
0 comments:
Post a Comment