ಬಂಟ್ವಾಳ, ಅಕ್ಟೋಬರ್ 06, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24 ರ ಪಾಣೆಮಂಗಳೂರು ಸಮೀಪದ ಬೋಗೋಡಿ ಒಳ ಪ್ರದೇಶದ ಕಾಂಕ್ರಿಟ್ ರಸ್ತೆ ಕಳೆದ ಹಲವು ಸಮಯಗಳಿಂದ ತೀವ್ರವಾಗಿ ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ಹಾಗೂ ಜನ ನಡೆದಾಡಲೂ ಕಷ್ಟ ಸಾಧ್ಯವಾದ ಸ್ಥಿತಿ ಮನಗಂಡು ಇಲ್ಲಿನ ಇಬ್ಬರು ಸಣ್ಣ ವಯಸ್ಸಿನ ಶಾಲಾ ವಿದ್ಯಾರ್ಥಿಗಳು ಭಾನುವಾರ ಬೆಳಿಗ್ಗೆ ರಸ್ತೆ ಮಧ್ಯದ ಗುಂಡಿಗೆ ಮಣ್ಣು ಹಾಕಿ ದುರಸ್ತಿಗೊಳಿಸುವ ಅಳಿಲು ಸೇವೆ ನಡೆಸಿ ಗಮನ ಸೆಳೆದಿದ್ದಾರೆ.
ಇಲ್ಲಿನ ಕಾಂಕ್ರಿಟ್ ರಸ್ತೆಯ ಮಧ್ಯಭಾಗದಲ್ಲೇ ಅಲ್ಲಲ್ಲಿ ಅಗೆದು ಹಾಕಿ ಹಾಗೇ ಬಿಡಲಾಗಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳು ನಡೆದಾಡಲೂ ಅನಾನುಕೂಲವಾಗಿರುವ ಬಗ್ಗೆ ಶನಿವಾರವಷ್ಟೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿತ್ತು. ಭಾನುವಾರ ಬೆಳಿಗ್ಗೆ ಈ ರಸ್ತೆಯ ಹೊಂಡ-ಗುಂಡಿಗಳಿರುವ ಸ್ಥಳಕ್ಕೆ ಇಬ್ಬರು ಸ್ಥಳೀಯ ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಮಣ್ಣು ತುಂಬಿಸಿ ವಾಹನ ಸವಾರರಿಗೆ ಒಂದಷ್ಟಾದರೂ ಅನುಕೂಲವಾಗಲಿ ಎಂಬ ಸನ್ಮನಸ್ಸಿನಿಂದ ಅಳೀಲು ಸೇವೆ ಸಲಲಿಸಿದ್ದಾರೆ.
ವಿದ್ಯಾರ್ಥಿಗಳ ಈ ಸೇವಾ ಮನೋಭಾವದ ಕೆಲಸದ ಫೋಟೋ ವೀಡಿಯೋಗಳು ಭಾನುವಾರ ಬೆಳಿಗ್ಗಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರು ಈ ಬಗ್ಗೆ ಶಹಬ್ಬಾಸ್ ಎಂದಿದ್ದಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಡೋಂಟ್ ಕ್ಯಾರ್ ಎನ್ನುತ್ತಿರುವ ಚುನಾಯಿತ ಜನಪ್ರತಿನಿಧಿಗಳ ಈ ವಿದ್ಯಾರ್ಥಿಗಳು ಪ್ರೇರಣೆಯಾಗಲಿ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
0 comments:
Post a Comment