ಮದ್ಯಮುಕ್ತ ಸಮಾಜ ಹಾಗೂ ಮತೀಯ ಐಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ವಿವೇಕ್ ವಿನ್ಸೆಂಟ್ ಪಾಯಸ್ - Karavali Times ಮದ್ಯಮುಕ್ತ ಸಮಾಜ ಹಾಗೂ ಮತೀಯ ಐಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ವಿವೇಕ್ ವಿನ್ಸೆಂಟ್ ಪಾಯಸ್ - Karavali Times

728x90

6 October 2024

ಮದ್ಯಮುಕ್ತ ಸಮಾಜ ಹಾಗೂ ಮತೀಯ ಐಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ವಿವೇಕ್ ವಿನ್ಸೆಂಟ್ ಪಾಯಸ್

ಬಂಟ್ವಾಳ, ಅಕ್ಟೋಬರ್ 06, 2024 (ಕರಾವಳಿ ಟೈಮ್ಸ್) : ಮದ್ಯಮುಕ್ತ ಸಮಾಜ ಹಾಗೂ ಮತೀಯ ಐಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ. ದೇಶದಲ್ಲಿ ಇಂದು ಆಧುನಿಕತೆಯ ಎಲ್ಲ ವ್ಯವಸ್ಥೆಗಳನ್ನೂ ಹೊಂದಿದ್ದು, ಈ ಎರಡು ವ್ಯವಸ್ಥೆ ಇಲ್ಲದಿರುವುದೇ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಆತಂಕ ವ್ಯಕ್ತಪಡಿಸಿದರು. 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಬಂಟ್ವಾಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಸಹಯೋಗದೊಂದಿಗೆ ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಗೈದ ಅವರು, ದೇಶದ ಮಾನವ ಸಂಪನ್ಮೂಲ ಹದಗೆಡಲು ಅಮಲು ಪದಾರ್ಥ ಸೇವನೆಯೊಂದೇ ಸಾಕು, ಬೇರಾವುದೇ ಕ್ಷಿಪಣಿ, ಬಾಂಬಿನ ಅಗತ್ಯವಿಲ್ಲ ಎಂದರು. 

ಸರ್ವ ಧರ್ಮ ಸಮ್ಮೇಳನ ಆಯೋಜಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಮತೀಯ ಐಕ್ಯತೆಗೆ ಹೊಸ ಭಾಷ್ಯ ಬರೆದಿದ್ದಾರಲ್ಲದೆ ನವಜೀವನ ಸಮಿತಿ ಸಮ್ಮೇಳನ ಆಯೋಜಿಸುವ ಮೂಲಕ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೂ ಪ್ರಯತ್ನ ನಡೆಸುತ್ತಿದ್ದಾರೆ ಎಂದ ಪಾಯಸ್ ಮಹಾತ್ಮಾ ಗಾಂಧೀಜಿಯವರ ಆದರ್ಶ, ಸಿದ್ದಾಂತವನ್ನು ಕೇವಲ ಗಾಂಧಿ ಜಯಂತಿಯಂದು ಮಾತ್ರವಲ್ಲದೆ ಪ್ರತಿದಿನ ನೆನೆಪಿಸಿಕೊಂಡು ಕೆಲಸ ನಿರ್ವಹಿಸುವ ಸಂಘಟನೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಪ್ರಸ್ತುತ ದಿನದಲ್ಲಿ ಮಾದಕ ವಸ್ತುಗಳ ಜಾಲ ಪ್ರಬಲವಾಗಿದೆ. ರಾಜ್ಯದಲ್ಲಿ 11 ಸಾವಿರಕ್ಕಿಂತಲೂ ಅಧಿಕ ಮದ್ಯದಂಗಡಿಗಳಿವೆ. ಆದರೆ ಒಂದೇ ಒಂದು ಅಮಲು ಮುಕ್ತಗೊಳಿಸುವ ಡಿ-ಎಡಿಕ್ಷನ್ ಸೆಂಟರ್ ಇಲ್ಲದೇ ಇರುವುದೇ ಈ ಸಮಾಜದ ದೊಡ್ಡ ದುರಂತ. ಈ ಬಗ್ಗೆ  ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು. 

ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಹೋರಾಟ ನಡೆಸಿ ಇಡೀ ದೇಶದ ಜನರ ಮನಗೆದ್ದಿದ್ದ ಮಹಾತ್ಮಾ ಗಾಂಧೀಜಿಯನ್ನು ಯಾರೋ ಪರಕೀಯರು ಕೊಂದಿಲ್ಲ. ಸ್ವಾತಂತ್ರ್ಯ ಬಂದು ಕೇವಲ ಐದೇ ತಿಂಗಳೊಳಗೆ ಸ್ವದೇಶೀಯರೇ ಗುಂಡಿಟ್ಟು ಕೊಂದರು. ಅದಕ್ಕಿಂತ ಒಂದಷ್ಟು ಕಾಲ ಅವರನ್ನು ಬದುಕಲು ಬಿಟ್ಟಿದ್ದರೆ ಅವರ ಬಹುಪಾಲು ಚಿಂತನೆಗಳು ಸ್ವತಂತ್ರ ಭಾರತದಲ್ಲಿ ಜಾರಿಗೆ ಬರುತ್ತಿದ್ದವು. ದೇಶದ ಬಹುತೇಕ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತಿದ್ದವು. ಆದರೆ ದುರದೃಷ್ಟವಶಾತ್ ನಮ್ಮಿಂದಲೇ ಅದಕ್ಕೆ ಅವಕಾಶ ನಿರಾಕರಿಸಲ್ಪಟ್ಟಿತು. ಇದುವೇ ನಮ್ಮ ದೌರ್ಭಾಗ್ಯ ಎಂದು ಪಾಯಸ್ ವಿಷಾದ ವ್ಯಕ್ತಪಡಿಸಿದರು. 

ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ ತುಕರಾಂ ಪೂಜಾರಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಯಾರು, ಏನು ಎಂಬುದನ್ನು ಇಡೀ ವಿಶ್ವ ಅರ್ಥ ಮಾಡಿಕೊಂಡಿದೆ. ಆದರೆ ನಾವಾದರೋ ಇಂದು ಅವರನ್ನು ಪ್ರಶ್ನೆ ಮಾಡುವ ಮಟ್ಟಕ್ಕೆ ತಲುಪಿದ್ದೇವೆ ಎಂದು ವಿಷಾದಿಸಿದರು. 

ಸ್ವಚ್ಚತೆಯ ಪರಿಕಲ್ಪನೆ ಸಾವಿರಾರು ವರ್ಷಗಳ ಹಿಂದೆ ತುಳುವರಲ್ಲಿತ್ತು.  ಆದರೆ ಇಂದು ನಾವು ಮರೆತ್ತಿದ್ದೇವೆ ಎಂದ ಅವರು ಮಹಾತ್ಮ ಗಾಂಧಿ ಹಾಗೂ ಡಾ ವೀರೇಂದ್ರ ಹೆಗ್ಗಡೆಯವರ  ಯೋಜನೆ, ಸಿದ್ದಾಂತವನ್ನು  ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು.

ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ ಸಿ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು.  ಹಾಲಿ ಅಧ್ಯಕ್ಷ ರೋನಾಲ್ಡ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಚಿದಾನಂದ ರೈ ಕಕ್ಯ, ಶೌರ್ಯ ವಿಪತ್ತು ತಂಡದ  ಕ್ಯಾಪ್ಟನ್ ಪ್ರಕಾಶ್, ಎಸ್ ಕೆ ಡಿ ಆರ್ ಡಿ ಪಿ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ವಲಯಧ್ಯಕ್ಷ ಮನ್ಮಥ ರಾಜ್ ಜೈನ್, ಪುರುಷೋತ್ತಮ ಸರಪಾಡಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಭಾಗವಹಿಸಿದ್ದರು. 

ಇದೇ ವೇಳೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವಿರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ಎಲ್  ಇ ಡಿ ಪರದೆ ಮೂಲಕ ಪ್ರಸಾರ ಮಾಡಲಾಯಿತು. ಇಬ್ಬರು ಮದ್ಯ ವ್ಯಸನ ತ್ಯಜಿಸಿದ ನವಜೀವನ ಸಮಿತಿ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ನವಜೀವನ ಸಮಿತಿ ಸದಸ್ಯರನ್ನು ಶಾಲು ಹಾಕಿ ಗೌರವಿಸಲಾಯಿತು.

ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಸ್ವಾಗತಿಸಿ, ವಗ್ಗ ವಲಯದ ಮೇಲ್ವಿಚಾರಕಿ ಸವಿತಾ ವಂದಿಸಿದರು. ಪಾಣೆಮಂಗಳೂರು ವಲಯದ ಮೇಲ್ವಿಚಾರಕಿ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

  • Blogger Comments
  • Facebook Comments

0 comments:

Post a Comment

Item Reviewed: ಮದ್ಯಮುಕ್ತ ಸಮಾಜ ಹಾಗೂ ಮತೀಯ ಐಕ್ಯತೆಯಿಂದ ದೇಶದ ಅಭಿವೃದ್ದಿ ಸಾಧ್ಯ : ವಿವೇಕ್ ವಿನ್ಸೆಂಟ್ ಪಾಯಸ್ Rating: 5 Reviewed By: karavali Times
Scroll to Top