ಬಂಟ್ವಾಳ, ಅಕ್ಟೋಬರ್ 25, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24 ರ ಪಾಣೆಮಂಗಳೂರು ಸಮೀಪದ ಆಲಡ್ಕ-ಬಂಗ್ಲೆಗುಡ್ಡೆ ಸಂಪರ್ಕದ ಹಾಮದ್ ಹಾಜಿ ಮನೆ ಸಮೀಪದ ರಸ್ತೆಯಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ನೀರು ನಿರಂತರವಾಗಿ ಪೋಲಾಗುತ್ತಿದ್ದು, ಕೆಲವು ತಿಂಗಳುಗಳೇ ಕಳೆದರೂ ಇನ್ನೂ ಕೇಳುವ ಗತಿಯಿಲ್ಲದಂತಾಗಿದೆ ಎಂದು ಸ್ಥಳೀಯ ಜನರು ಪುರಸಭಾಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಕಾಂಕ್ರಿಟ್ ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗಲು ಆರಂಭಗೊಂಡು 2-3 ತಿಂಗಳುಗಳೇ ಕಳೆದಿದೆ. ಈ ಬಗ್ಗೆ ಸಾಕಷ್ಟು ಬಾರಿ ಸ್ಥಳೀಯ ಕೌನ್ಸಿಲರ್ ಹಾಗೂ ಪುರಸಭಾಧಿಕಾರಿಗಳ ಗಮನಕ್ಕೆ ತಂದರೂ ಇಂದು ಕಳಿಸುತ್ತೇವೆ, ನಾಳೆ ಕಳಿಸುತ್ತೇವೆ ಎಂಬ ಹಾರಿಕೆಯ ಉತ್ತರ ಬಿಟ್ಟರೆ ಪರಿಹಾರ ಮಾತ್ರ ಶೂನ್ಯ ಎನ್ನುತ್ತಾರೆ ಸ್ಥಳೀಯರು. ಮೂಲಭೂತ ಸೌಲಭ್ಯವಾಗಿರುವ ಕುಡಿಯುವ ನೀರಿನ ಗತಿಯೇ ಈ ರೀತಿಯಾದರೆ ಇನ್ಯಾವ ಕಾಮಗಾರಿ ಇಲ್ಲಿ ನಡೆಯಲು ಸಾಧ್ಯ ಎಂದು ನಾಗರಿಕರು ತೀವ್ರ ಆಕ್ರೋಶಭರಿತರಾಗಿ ಪ್ರಶ್ನಿಸುತ್ತಿದ್ದಾರೆ.
ಪೈಪ್ ಒಡೆದಿರುವ ಪರಿಣಾಮ ಜೀವಜಲ ಪೋಲಾಗುತ್ತಿರುವುದು ಒಂದೆಡೆಯಾದರೆ, ಪೋಲಾಗುತ್ತಿರುವ ನೀರು ಸ್ಥಳೀಯವಾಗಿ ಹರಿದು ಬಂದು ಇಡೀ ಪರಿಸರದಲ್ಲಿ ಕೆಸರು ಉಂಟಾಗಿ ಶಾಲಾ-ಮದ್ರಸಗಳ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ವಾರ್ಡಿನ ನಾಗರಿಕರಿಗೆ ಪೂರಕವಾಗಿ ಯಾವುದೇ ಕೆಲಸ-ಕಾರ್ಯಗಳನ್ನು ನಿರಂತರ ಕೋರಿಕೆ ಮಾಡಿದರೂ ಕೈಗೊಳ್ಳದೆ ಜನರಿಗೆ ಸದಾ ಬೆನ್ನು ಹಾಕಿಯೇ ವರ್ತಿಸುತ್ತಿರುವುದು ಇಲ್ಲಿನ ನಾಗರಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಕ್ಷಣ ಜನಪ್ರತಿನಿಧಿಗಳು ಹಾಗೂ ಪುರಸಭಾಧಿಕಾರಿಗಳು ಎಚ್ಚೆತ್ತು ನಾಗರಿಕರ ಬೇಡಿಕೆಗೆ ಮನ್ನಣೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭಾ ಕಛೇರಿಯಲ್ಲೇ ಹೋಗಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
0 comments:
Post a Comment