ಪಾಣೆಮಂಗಳೂರು-ಬೋಗೋಡಿ ಹದಗೆಟ್ಟ ಕಾಂಕ್ರಿಟ್ ರಸ್ತೆ |
ಸ್ಥಳೀಯ ಕೌನ್ಸಿಲರ್ ಸಿದ್ದೀಕ್ |
ಬಂಟ್ವಾಳ, ಅಕ್ಟೋಬರ್ 05, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 24 ರ ಪಾಣೆಮಂಗಳೂರು ಸಮೀಪದ ಬೋಗೋಡಿ ಒಳ ಪ್ರದೇಶದ ಕಾಂಕ್ರಿಟ್ ರಸ್ತೆ ಕಳೆದ ಹಲವು ಸಮಯಗಳಿಂದ ತೀವ್ರವಾಗಿ ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ಹಾಗೂ ಜನ ನಡೆದಾಡಲೂ ಕಷ್ಟ ಸಾಧ್ಯವಾದ ಸ್ಥಿತಿ ಇದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕಾಂಕ್ರಿಟ್ ರಸ್ತೆಯ ಮಧ್ಯಭಾಗದಲ್ಲೇ ನೀರಿನ ಪೈಪ್ ಅದು ಇದು ಎಂದು ಅಲ್ಲಲ್ಲಿ ಅಗೆದು ಹಾಕಿ ಹಾಗೇ ಬಿಡಲಾಗಿರುವುದೇ ರಸ್ತೆಯ ದುರವಸ್ಥೆಗೆ ಕಾರಣವಾಗಿ ಎನ್ನುವ ಸ್ಥಳೀಯರು ರಸ್ತೆ ಮಾತ್ರವಲ್ಲದೆ ಇಲ್ಲಿನ ಚರಂಡಿ ವ್ಯವಸ್ಥೆಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟು ಹೋಗಿದ್ದು, ಮಳೆಗಾಲ-ಬೇಸಿಗೆ ಕಾಲದಲ್ಲೂ ಈ ಅವ್ಯವಸ್ಥೆಯಿಂದಾಗಿ ಜನ ಸಮಸ್ಯೆ ಎದುರಿಸಲಾಗುತ್ತಿದೆ ಎನ್ನುತ್ತಾರೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಕೌನ್ಸಿಲರ್ ಗಳಲ್ಲಿ ಸಾಕಷ್ಟು ಬಾರಿ ಮನವರಿಕೆ ಮಾಡಿಕೊಂಡರೂ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಡೋಂಟ್ ಕ್ಯಾರ್ ಎನ್ನುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯ ದೋರಣೆಯ ವಿರುದ್ದ ಸೆಟೆದು ನಿಂತಿರುವ ಸ್ಥಳೀಯರು ಇದೀಗ ಇಲ್ಲಿನ ಸಮಸ್ಯೆಗಳ ಬಗ್ಗೆ ಫೋಟೋ ವೀಡಿಯೋ ಸಹಿತ ಧ್ವನಿ ಸಂದೇಶಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟು ಪುರಸಭಾಧಿಕಾರಿಗಳ ಹಾಗೂ ರಾಜಕೀಯ ಪಕ್ಷಗಳ ಹೈಕಮಾಂಡ್ ಮಟ್ಟದ ನಾಯಕರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಶೀಘ್ರದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿನ ರಸ್ತೆ, ಚರಂಡಿ, ನೀರು, ಕಸ-ತ್ಯಾಜ್ಯ ಸಮಸ್ಯೆಗಳ ಬಗ್ಗೆ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭಾ ಕಚೇರಿಯ ಮುಂದೆ ಬೃಹತ್ ಮಟ್ಟದಲ್ಲಿ ಪ್ರತಿಭಟನೆ-ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯ ಪುರವಾಸಿಗಳು ಎಚ್ಚರಿಸಿದ್ದಾರೆ.
0 comments:
Post a Comment