ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ
ಬಂಟ್ವಾಳ, ಅಕ್ಟೋಬರ್ 09, 2024 (ಕರಾವಳಿ ಟೈಮ್ಸ್) : ಧಾರ್ಮಿಕ ಆಚರಣೆ ಮೂಲ ಉದ್ದೇಶವಾದರೂ ಸಾಮಾಜಿಕ ಕಾಳಜಿ ಶ್ರದ್ಧಾ ಕೇಂದ್ರದ ಆಶಯವಾಗಬೇಕು. ಅನ್ನದಾನ, ವಿದ್ಯಾದಾನಾದಿ ಸಮಾಜಮುಖಿ ಕೆಲಸಗಳು ಪ್ರಸಾದ ರೂಪವಾಗಿ ಫಲಾನುಭವಿಯ ಬಳಿ ಸೇರಬೇಕು. ಕೊಡುವ ಅಹಂಭಾವ ಹಾಗೂ ಪಡೆದ ದೀನ ಭಾವವೂ ಇರದಂತೆ ನಡೆಯುವುದೇ ಧರ್ಮದ ಆಶಯವಾಗಬೇಕು ಎಂದು ಮಂಗಳೂರು-ಅರಕೆರೆಬೈಲು ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ ಹೇಳಿದರು.
ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಸಮೀಪದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡಿದರು.
ನಿವೃತ್ತ ಎ ಆರ್ ಟಿ ಒ ವಿಶ್ವನಾಥ ನಾಯ್ಕ ಮಾತನಾಡಿ, ಮನಃಶುದ್ಧಿ ಮನಃಶಾಂತಿಗಾಗಿ ನಡೆಯಬೇಕಾಗಿದ್ದ ಶ್ರದ್ಧೆ, ಆಚರಣೆಗಳು ಈ ದಿನಗಳಲ್ಲಿ ಕೇವಲ ತೋರ್ಪಡಿಕೆಯ ಕ್ರಮಗಳಾಗಿ ಪರಿವರ್ತಿತವಾಗುತ್ತಿರುವುದು ಖೇದಕರ ಸಂಗತಿ. ಹೆಚ್ಚು ಖರ್ಚು ಮಾಡುವುದು, ಮೆರೆಯುವುದು, ಪೂಜಾದಿ ಆಚರಣೆಗಳನ್ನು ಹಣದ ಖರ್ಚಿನ ಆಧಾರದ ಮೇಲೆ ಪ್ರದರ್ಶಿಸುವುದನ್ನು ಎಂದಿಗೂ ಶ್ರದ್ಧೆ ಅಥವಾ ಭಕ್ತಿ ಎಂದು ಕರೆಯಲಾಗದು. ಮತ್ತೊಂದು ವಿಶೇಷವಾಗಿ ಹಿಂದೂ ದೇವಸ್ಥಾನವೊಂದರ ಹಬ್ಬದ ಸಡಗರದ ವೇದಿಕೆಯಲ್ಲಿ ಸಾಧನೆ ಮಾಡಿದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಕೂಡ ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು.
ಜ್ಯೋತಿಗುಡ್ಡೆ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ಸಂಚಾಲಕ ನಾರಾಯಣ ನಾಯ್ಕ್ ಪೆರ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ, ಕುಚ್ಚಿಗುಡ್ಡೆ, ರಾಮಲ್ ಕಟ್ಟೆ ಎಳೆಯರ ಬಳಗದ ಅಧ್ಯಕ್ಷ ಪೂಜೇಶ್ ಆಚಾರ್ಯ, ಕೃಷ್ಣಾರಾಧ್ಯಂ ಜ್ಯೋತಿಷ್ಯ ಅನಿಲ್ ಪಂಡಿತ್ ಮುಖ್ಯ ಅತಿಥಿಗಳಾಗಿದ್ದರು.
ಇದೇ ವೇಳೆ ಸ್ಥಳೀಯ ಸರಕಾರಿ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಬ್ರಹ್ಮರಕೂಟ್ಲು ಸರಕಾರಿ ಶಾಲಾ ವಿದ್ಯಾರ್ಥಿನಿ ಕು ವೈಷ್ಣವಿ, ಕಳ್ಳಿಗೆ-ನೆತ್ರಕರೆ ಶಾಲಾ ವಿದ್ಯಾರ್ಥಿಗಳಾದ ಕು ಲಹರಿ ಎಸ್ ಹಾಗೂ ದೇವಿಕಾ ಆರ್, ತುಂಬೆ ಶಾಲಾ ವಿದ್ಯಾರ್ಥಿನಿ ಕು ಕಾವ್ಯ, ಕೊಡ್ಮಣ್ ಶಾಲಾ ವಿದ್ಯಾರ್ಥಿ ಸುಶಾನ್, ಅಜ್ಜಿಬೆಟ್ಟು ಶಾಲಾ ವಿದ್ಯಾರ್ಥಿ ಮುಹಮ್ಮದ್ ಮುಬಶಿರ್, ಬೆಂಜನಪದವು ಶಾಲಾ ವಿದ್ಯಾರ್ಥಿನಿ ಶಿಫಾನ, ಬಂಟ್ವಾಳ ಮೂಡ ಶಾಲಾ ವಿದ್ಯಾರ್ಥಿನಿ ಕು ಕುಶಿ, ಹಾಗೂ ಎಂಎ ಹಿಂದಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಕು ರಶ್ಮಿತಾ ಪೆರಿಯೋಡಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಕಉಮಾರ್ ರೆಂಜೋಡಿ ಸ್ವಾಗತಿಸಿ, ಟ್ರಸ್ಟಿ ಟಿ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು.
ಬಳಿಕ ಯಕ್ಷಜ್ಯೋತಿ ಜ್ಯೋತಿಗುಡ್ಡೆ ಸಂಯೋಜನೆಯಲ್ಲಿ ಯಕ್ಷ ಕಾವ್ಯ ತರಂಗಿಣಿ (ರಿ) ದಿವಂಗತ ಚಂದಪ್ಪ ಪೂಜಾರಿ ಪ್ರತಿಷ್ಠಾನ, ಬಂಟ್ವಾಳ ದರ್ಬೆ ಇವರಿಂದ ಯಕ್ಷಗಾನ “ಕೃಷ್ಣ ಲೀಲೆ-ಕಂಸ ವಧೆ” ಯಕ್ಷಗಾನ ಬಯಲಾಟ ಹಾಗೂ ಅಮ್ಮುಂಜೆ-ಕಲಾಯಿ ಶ್ರೀ ಅಂಬಿಕಾ ಯಕ್ಷಗಾನ ಕಲಾ ಮಂಡಳಿಯವರಿಂದ ಕರ್ಣಾರ್ಜುನ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಮಲ್ಲಿಕಾ ಎಂ ಜ್ಯೋತಿಗುಡ್ಡೆ ಪ್ರಾರ್ಥಿಸಿದರು. ಸುಜಾತ ನವೀನ್ ಗುಂಡಿಬೆಟ್ಟು ಹಾಗೂ ರೇಶ್ಮಾ ಯಶವಂತ್ ಮುಂಡಾಜೆ ಸನ್ಮಾನಿತರ ಪರಿµಚಯಿಸಿದರು. ವೇಣುಗೋಪಾಲ್ ಜ್ಯೋತಿಗುಡ್ಡೆ ವಂದಿಸಿ, ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment