ಕಡಬ, ಅಕ್ಟೋಬರ್ 14, 2024 (ಕರಾವಳಿ ಟೈಮ್ಸ್) : ಮನೆ ಮಂದಿ ಟ್ರಿಪ್ ಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಸಹಿತ ಇತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು, ಸವಣೂರು ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ವೇಳೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಸಲೀಂ ಕೆ (39) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ತಮ್ಮ ಪತ್ನಿ-ಮಕ್ಕಳ ಜೊತೆ ಅ 11 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಟ್ರಿಪ್ ಗೆ ತೆರಳಿದ್ದು, ಅ 13 ರಂದು ಮಧ್ಯ ರಾತ್ರಿ ವೇಳೆ ವಾಪಾಸು ಮನೆಗೆ ಬಂದು ನೋಡಿದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಎದುರುಗಡೆ ಬೀಗ ಮುರಿದು ಒಳಪ್ರವೇಶಿಸಿದ ಕಳ್ಳರು, ಗೋದ್ರೆಜಿನಲ್ಲಿದ್ದ 2.12 ಲಕ್ಷ ರೂಪಾಯಿ ಮೌಲ್ಯದ 53 ಗ್ರಾಂ ಚಿನ್ನಾಭರಣ, 30 ಸಾವಿರ ರೂಪಾಯಿ ನಗದು ಹಣ, 4 ಸಾವಿರ ರೂಪಾಯಿ ಮೌಲ್ಯದ ಸಾಕ್ಸಿಂಗ್ ಕಂಪೆನಿಯ ಟ್ಯಾಬ್, 15 ಸಾವಿರ ರೂಪಾಯಿ ಮೌಲ್ಯದ ಟಿಸಾಟ್ ಕಂಪೆನಿಯ ವಾಚ್ ಕಳವುಗೈಯಲಾಗಿದೆ. ಈ ಬಗ್ಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment