ಬಂಟ್ವಾಳ, ಅಕ್ಟೋಬರ್ 22, 2024 (ಕರಾವಳಿ ಟೈಮ್ಸ್) : ವ್ಯಕ್ತಿಗೆ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಶಾಲಾ ಬಳಿ ಮಂಗಳವಾರ ರಾತ್ರಿ ವೇಳೆ ನಡೆದಿದೆ.
ತಲವಾರು ದಾಳಿಗೊಳಗಾದ ವ್ಯಕ್ತಿಯನ್ನು ಅಮೆಮ್ಮಾರ್ ನಿವಾಸಿ ತಸ್ಲೀಂ (33) ಎಂದು ಹೆಸರಿಸಲಾಗಿದೆ. ಮನ್ಸೂರ್ ಹಾಗೂ ಆತನ ತಂಡದವರು ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತಸ್ಲೀಂ ಅವರ ಸಹೋದರ ಸಾದಿಕ್ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಮಂಗಳವಾರ ರಾತ್ರಿ ಸಾದಿಕ್, ತಸ್ಲೀಂ ಹಾಗೂ ಇತರರು ಮನೆ ಬಳಿ ರಸ್ತೆಯಲ್ಲಿ ನಿಂತಿದ್ದಾಗ ತಸ್ಲೀಂಗೆ ಯಾರೋ ಕರೆ ಮಾಡಿ ಅವಾಚ್ಯವಾಗಿ ಬೈದು ಅಮ್ಮೆಮಾರ್ ಶಾಲಾ ಬಳಿ ನಾಲ್ಕು ಮಾರ್ಗ ಎಂಬಲ್ಲಿಗೆ ಬರುವಂತೆ ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಲು ತಸ್ಲೀಂ, ಸಾದಿಕ್ ಹಾಗೂ ಇತರರು ಅಮ್ಮೆಮಾರ್ ಶಾಲಾ ಬಳಿ ತೆರಳಿದಾಗ ಅಲ್ಲಿ ಆರೋಪಿತ ಮನ್ಸೂರ್ ಹಾಗೂ ಆತನೊಂದಿಗಿದ್ದ ಇತರರು ತಸ್ಲೀಂಗೆ ತಲವಾರು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ತಸ್ಲೀಂನನ್ನು ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2024, ಕಲಂ 189[2], 191[2] 191[3], 352, 115[2], 118[1], 118[2], 109 ಜೊತೆಗೆ 190 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment