ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬಡ ಗ್ರಾಹಕರಿಗೆ ಬೆಲೆಯೇ ಇಲ್ಲ : ಬಡವರು ಬ್ಯಾಂಕ್ ಬಾಗಿಲಿಗೆ ಬರುವಂತಿಲ್ಲವೇ? ನೊಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸುವವರು ಯಾರು? - Karavali Times ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬಡ ಗ್ರಾಹಕರಿಗೆ ಬೆಲೆಯೇ ಇಲ್ಲ : ಬಡವರು ಬ್ಯಾಂಕ್ ಬಾಗಿಲಿಗೆ ಬರುವಂತಿಲ್ಲವೇ? ನೊಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸುವವರು ಯಾರು? - Karavali Times

728x90

22 October 2024

ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬಡ ಗ್ರಾಹಕರಿಗೆ ಬೆಲೆಯೇ ಇಲ್ಲ : ಬಡವರು ಬ್ಯಾಂಕ್ ಬಾಗಿಲಿಗೆ ಬರುವಂತಿಲ್ಲವೇ? ನೊಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸುವವರು ಯಾರು?

ಒಂದು ಕಾಲದಲ್ಲಿ ಪೂಜಾರಿ ಅವರು ಬಡವರನ್ನು ಬ್ಯಾಂಕ್ ಬಾಗಿಲಿಗೆ ಕರೆ ತಂದರೆ, ಇದೀಗ ಬ್ಯಾಂಕ್ ಒಳಗಿರುವ ಅಧಿಕಾರಿಗಳು-ಸಿಬ್ಬಂದಿಗಳು ಬಡವರನ್ನು ಬ್ಯಾಂಕ್ ಬಳಿ ಸುಳಿಯಂತೆ ತಡೀತಿದ್ದಾರೆ


ಬಂಟ್ವಾಳ, ಅಕ್ಟೋಬರ್ 22, 2024 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಅನಕ್ಷರಸ್ಥ ಬಡ ಗ್ರಾಹಕರಿಗೆ ಬೆಲೆಯೇ ಇಲ್ಲದಂತಾಗಿದ್ದು, ಬಡವರು ಬ್ಯಾಂಕ್ ಬಾಗಿಲಿಗೆ ಬರುವಂತಿಲ್ಲವೇ ಎಂದು ಬಡ ಬ್ಯಾಂಕ್ ಗ್ರಾಹಕರು ಪ್ರಶ್ನಿಸಿದ್ದಾರೆ. ಇಲ್ಲಿನ ಶಾಖೆಗೆ ಬಡ ಗ್ರಾಹಕರು ತೆರಳಿದರೆ ಇಲ್ಲಿನ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ತಲೆ ಎತ್ತಿ ಕೂಡಾ ನೋಡುವುದಿಲ್ಲ. ಬದಲಾದ ಬ್ಯಾಂಕಿಂಗ್ ವ್ಯವಸ್ಥೆಗಳ ಬಗ್ಗೆ ಇಲ್ಲದ ಅರಿವಿನ ಬಗ್ಗೆ ಅಧಿಕಾರಿಗಳಲ್ಲಿ ಅಥವಾ ಸಿಬ್ಬಂದಿಗಳಲ್ಲಿ ಕೇಳಿದರೆ ಕನಿಷ್ಠ ಉತ್ತರಿಸುವ ಸೌಜನ್ಯ ಯಾರಲ್ಲೂ ಇಲ್ಲ ಎಂದು ದೂರುವ ಗ್ರಾಹಕರು ಅದರಲ್ಲೂ ಅನಕ್ಷರಸ್ಥ ಗ್ರಾಹಕರು ಬ್ಯಾಂಕ್ ಚಲನ್ ಅಥವಾ ಚೆಕ್ ಹಾಳೆಯನ್ನು ತುಂಬಿಸಿಕೊಡುವಂತೆ ಕೇಳಿಕೊಂಡರೆ ಅಲ್ಲಿ ಕೇಳುವ ಗತಿಯೇ ಇಲ್ಲ ಎನ್ನುತ್ತಾರೆ. ಇಲ್ಲಿನ ಬ್ಯಾಂಕ್ ಶಾಖೆಯಲ್ಲಿ ಸ್ಥಳೀಯ ಭಾಷೆಯ ಮೇಲೆ ಹಿಡಿತ ಇಲ್ಲದೆ ಇರುವ ಅಧಿಕಾರಿ-ಸಿಬ್ಬಂದಿಗಳೇ ತುಂಬಿ ಹೋಗಿದ್ದು, ಇದರಿಂದಲೇ ಬಡ ಅನಕ್ಷರಸ್ಥ ಗ್ರಾಹಕರು ತೀವ್ರ ರೋಸಿ ಹೋಗಿದ್ದು, ಇದೀಗ ಅಧಿಕಾರಿ-ಸಿಬ್ಬಂದಿಗಳ ಸ್ಪಂದನೆಯ ಕೊರತೆಯ ಕಾರಣಕ್ಕಾಗಿ ಮತ್ತಷ್ಟು ನಿರಾಸೆ ಅನುಭವಿಸುತ್ತಿದ್ದಾರೆ. 

ಸಾಮಾನ್ಯವಾಗಿ ಬ್ಯಾಂಕ್ ಶಾಖೆಗಳಲ್ಲಿ ಗ್ರಾಹಕರಿಗಾಗಿ ಸಹಾಯಕೇಂದ್ರಗಳು ಕಾರ್ಯಾಚರಿಸುತ್ತಿರಬೇಕಾಗಿದೆ. ಅಥವಾ ಗ್ರಾಹಕರ ಬೇಕು-ಬೇಡಗಳಿಗೆ ಸ್ಪಂದಿಸಲು ಓರ್ವ ಸಿಬ್ಬಂದಿಯ ನೇಮಕವನ್ನಾದರೂ ಮಾಡಿಕೊಳ್ಳಬೇಕಾಗಿರುವುದು ನಿಯಮ. ಗ್ರಾಹಕರ ಹಿತವನ್ನೇ ಮುಖ್ಯವಾಗಿ ಗಮನಿಸಬೇಕಾದ ಬ್ಯಾಂಕ್ ಶಾಖೆ ಇದ್ಯಾವುದನ್ನೂ ಪಾಲಿಸದೆ ಗ್ರಾಹಕರ ತಾಳ್ಮೆಯನ್ನೇ ಪ್ರಶ್ನಿಸುವಂತಿದ್ದಾರೆ ಎಂದು ಇಲ್ಲಿನ ಬಡ ಗ್ರಾಹಕರು ಆರೋಪಿಸಿದ್ದಾರೆ. 

ಈ ಬಗ್ಗೆ ದೂರು ನೀಡಲು ಅಥವಾ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ಗ್ರಾಹಕರು ಲೀಡ್ ಬ್ಯಾಂಕ್ ಸಂಪರ್ಕ ಸಂಖ್ಯೆಗೆ ಫೋನಾಯಿಸಿದರೆ ಅಲ್ಲಿಯೂ ಕನಿಷ್ಠ ಫೋನ್ ಕರೆ ಸ್ವೀಕರಿಸುವ ಸೌಜನ್ಯದ ಸಿಬ್ಬಂದಿಗಳು ಅಲ್ಲಿಯೂ ಇರುವುದಿಲ್ಲ. ಹೀಗಿರುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಬದಲಾದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ ಎಂದು ಬ್ಯಾಂಕ್ ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. 

ಈ ಹಿಂದೆ ಜನಾರ್ದನ ಪೂಜಾರಿ ಅವರು ಕೇಂದ್ರದ ವಿತ್ತ ಸಚಿವರಾಗಿದ್ದಾಗ ಸಾಲ ಮೇಳ ಆಯೋಜಿಸುವ ಮೂಲಕ ಬಡವರು, ಅನಕ್ಷರಸ್ಥರನ್ನು ಕೂಡಾ ಬ್ಯಾಂಕ್ ಬಾಗಿಲಿಗೆ ಕರೆ ತಂದು ಆರ್ಥಿಕ ಸಂಸ್ಥೆಗಳನ್ನು ಜನಸ್ನೇಹಿಯನ್ನಾಗಿ ಮಾಡಿದ್ದರು. ಅದರಿಂದ ಇಂದಿನವರೆಗೂ ಜನ ಶ್ರೀಮಂತ, ಬಡವ-ಬಲ್ಲಿದರೆನ್ನದೆ ಸಲೀಸಾಗಿ ಬ್ಯಾಂಕ್ ಬಾಗಿಲಿಗೆ ಬಂದು ತಮ್ಮ ಆರ್ಥಿಕ ದಾಹವನ್ನು ನೀಗಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಬದಲಾದ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ಬ್ಯಾಂಕಿನ ಒಳಗಿರುವ ಅಧಿಕಾರಿ-ಸಿಬ್ಬಂದಿಗಳು ಬಡವರನ್ನು ಇನ್ನಿಲ್ಲದ ರೀತಿಯಲ್ಲಿ ಸತಾಯಿಸುವ ಮೂಲಕ ಬಡ ಗ್ರಾಹಕರು ಬ್ಯಾಂಕಿನತ್ತ ಸುಳಿಯದಂತೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬಡ ಗ್ರಾಹಕರಿಗೆ ಬೆಲೆಯೇ ಇಲ್ಲ : ಬಡವರು ಬ್ಯಾಂಕ್ ಬಾಗಿಲಿಗೆ ಬರುವಂತಿಲ್ಲವೇ? ನೊಂದ ಗ್ರಾಹಕರ ಪ್ರಶ್ನೆಗೆ ಉತ್ತರಿಸುವವರು ಯಾರು? Rating: 5 Reviewed By: karavali Times
Scroll to Top