ಬಂಟ್ವಾಳ, ಅಕ್ಟೋಬರ್ 07, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ಪರಿಹಾರವಾಗದ ತ್ಯಾಜ್ಯ ಸಮಸ್ಯೆಯಿಂದಾಗಿ ಇದೀಗ ಬೀದಿ ನಾಯಿಗಳ ಹಾವಳಿ ಆರಂಭವಾಗಿದೆ. ಪುರಸಭಾ ವ್ಯಾಪ್ತಿಯ ಹಲವು ಬೀದಿಗಳಲ್ಲಿ ಬೀದಿ ನಾಯಿಗಳ ಹಿಂಡು ಕಂಡು ಬರುತ್ತಿದ್ದು, ರಾತ್ರಿ-ಹಗಲೆನ್ನದೆ ಬೀದಿಗಳಲ್ಲಿ ಆರ್ಭಟಿಸುತ್ತಾ ಓಡಾಡುವ ಬೀದಿ ನಾಯಿಗಳಿಂದಾಗಿ ಶಾಲಾ-ಮದ್ರಸಗಳಿಗೆ ತೆರಳುವ ಮಕ್ಕಳು ಹಾಗೂ ನಾಗರಿಕರು ದಾಳಿ ಭೀತಿಯ ಆತಂಕ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಎಸ್ ಎಲ್ ಎನ್ ಪಿ ಶಾಲಾ ಬಳಿ ಕಳೆದ ಹಲವು ಸಮಯಗಳಿಂದ ಬೀದಿ ನಾಯಿಗಳ ಹಿಂಡೇ ಇಲ್ಲಿನ ಮುಖ್ಯ ರಸ್ತೆಗಳಲ್ಲೇ ಸಂಚರಿಸುತ್ತಿದ್ದು, ಇಲ್ಲಿನ ಶಾಲಾ ವಿದ್ಯಾರ್ಥಿಗಳ ಸಹಿತ ಪುರವಾಸಿಗಳು ತೀವ್ರ ಭೀತಿ ಎದುರಿಸುತ್ತಿದ್ದಾರೆ.
ಇತ್ತೀಚೆಗೆ ಪುರಸಭಾ ನೂತನ ಅಧ್ಯಕ್ಷರು, ಸ್ಥಳೀಯ ಸದಸ್ಯರು, ಪುರಸಭಾ ಆರೋಗ್ಯಾಧಿಕಾರಿಗಳು ಇಲ್ಲಿನ ಶಾಲಾ ಬಳಿ ರಾಶಿ ಬಿದ್ದಿರುವ ತ್ಯಾಜ್ಯ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದ್ದು, ತ್ಯಾಜ್ಯ ವಿಲೇವಾರಿ ಮಾಡಿ ಮುಂದಕ್ಕೆ ಸಾರ್ವಜನಿಕರು ತ್ಯಾಜ್ಯ ಎಸೆಯದಂತೆ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತೆರಳಿದ್ದರು. ಇದಾಗಿ ತಿಂಗಳಾಗುತ್ತಿದ್ದರೂ ಇನ್ನೂ ತ್ಯಾಜ್ಯ ವಿಲೇವಾರಿಯಾಗಲೀ, ಸುರಕ್ಷತಾ ಕ್ರಮವಾಗಲೀ ಯಾವುದೂ ಆಗಿರುವುದಿಲ್ಲ. ಈ ಬಗ್ಗೆ ಅಧ್ಯಕ್ಷ-ಸದಸ್ಯರಾಗಲೀ, ಅಧಿಕಾರಿಗಳಾಗಲೀ ಕನಿಷ್ಠ ಪ್ರಯತ್ನವನ್ನೂ ನಡೆಸದೆ ಇದ್ದು, ಇದುವೇ ಇದೀಗ ಬೀದಿ ನಾಯಿಗಳ ಹಾವಳಿ ಆರಂಭವಾಗಿ ನಾಗರಿಕರಿಗೆ ನಾಯಿ ದಾಳಿ ಭೀತಿ ಎದುರಾಗಿದೆ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ನಾಗರಿಕರ ಭೀತಿಯನ್ನು ಹೋಗಲಾಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
0 comments:
Post a Comment